ಬದಿಯಡ್ಕ: ಸೋಡ ಹಾಗೂ ಸಿಗರೇಟ್ ಸಾಲವಾಗಿ ನೀಡದ ದ್ವೇಷದಿಂದ ವ್ಯಕ್ತಿಯೊಬ್ಬ ಅಂಗಡಿಯ ಗೋದಾಮಿಗೆ ಕಿಚ್ಚಿಟ್ಟು ನಾಶಗೊಳಿಸಿದ ಪ್ರಕರಣ ಬೆಳಕಿಗೆ ಬಂದಿದೆ.
ನೀರ್ಚಾಲು ಸಮೀಪದ ಕನ್ಯಪ್ಪಾಡಿಯಲ್ಲಿರುವ ಜೆ.ಕೆ. ಬೇಕರ್ಸ್ ಹಾಗೂ ಜೆ.ಕೆ. ಅರೇಂಜರ್ಸ್ ಎಂಬ ವ್ಯಾಪಾರ ಸಂಸ್ಥೆಯ ಗೋದಾಮಿಗೆ ಕಿಚ್ಚಿಡಲಾಗಿದೆ. ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ. ಈ ಬಗ್ಗೆ ಅಂಗಡಿಯ ಮಾಲಕ ಕುಂಟಿಕಾನದ ಲ್ಯಾನ್ಸರ್ ಡಿಸೋಜಾ ನೀಡಿದ ದೂರಿನಂತೆ ತಲ್ಪನಾಜೆಯ ಸಂತು ಯಾನೆ ಸಂತೋಷ್ ಎಂಬಾತನ ವಿರುದ್ದ ಬದಿಯಡ್ಕ ಪೋಲೀಸರು ಕೇಸು ದಾಖಲಿಸಿದ್ದಾರೆ.
ಶುಕ್ರವಾರ ರಾತ್ರಿ 9 ಗಂಟೆ ವೇಳೆ ಸಂತೋಷ್ ಸೀಮೆಎಣ್ಣೆ ಸುರಿದು ಅಂಗಡಿ ಗೋದಾಮಿಗೆ ಕಿಚ್ಚಿರಿಸಿದ್ದಾನೆಂದು ದೂರಲಾಗಿದೆ. ಗೋದಾಮು ಉರಿಯುತ್ತಿರುವುದನ್ನು ಕಂಡು ತಲುಪಿದ ಅಂಗಡಿ ನೌಕರರು ಹಾಗೂ ಸ್ಥಳೀಯರು ಸೇರಿ ಬೆಂಕಿ ನಂದಿಸಿದ್ದಾರೆ. ಸುಮಾರು 4 ಲಕ್ಷ ರೂಪಾಯಿಗಳ ಸಾಮಗ್ರಿ ಉರಿದು ನಾಶಗೊಂಡಿದೆ ಎಂದು ದೂರಲಾಗಿದೆ. ಶುಕ್ರವಾರ ಮಧ್ಯಾಹ್ನ ವೇಳೆ ಜೆ.ಕೆ. ಬೇಕರ್ಸ್‍ಗೆ ಬಂದ ಸಂತೋಷ್ ಸಿಗರೇಟ್ ಹಾಗೂ ಸೋಡ ಸಾಲ ಕೇಳಿದ್ದ. ಆದರೆ ಸಾಲ ನೀಡಿರಲಿಲ್ಲವೆನ್ನಲಾಗಿದೆ. ಇದೇ ದ್ವೇಷದಿಂದ ರಾತ್ರಿ ತಲುಪಿ ಅಂಗಡಿಯ ಗೋದಾಮಿಗೆ ಸಂತೋಷ್ ಬೆಂಕಿ ಹಚ್ಚಿರುವುದಾಗಿ ಆರೋಪಿಸಲಾಗಿದೆ.