ಸಮಸ್ತಿಪುರ: ಮಾಜಿ ಸಚಿವ ಹಾಗೂ ಆರ್‌ಜೆಡಿ ಪಕ್ಷದ ನಾಯಕ ತೇಜ್ ಪ್ರತಾಪ್ ಯಾದವ್ ಅವರ ಭದ್ರತೆಗೆ ನಿಯೋಜನೆಗೊಂಡಿದ್ದ ಕಾನ್‌ಸ್ಟೇಬಲ್, ಹೋಳಿ ಸಂಭ್ರಮಾಚರಣೆ ವೇಳೆ ಸಮವಸ್ತ್ರದಲ್ಲಿದ್ದಾಗೇ ನೃತ್ಯ ಮಾಡಿದ್ದಕ್ಕಾಗಿ ಶಿಸ್ತು ಕ್ರಮ ಕೈಗೊಳ್ಳಲಾಗಿದೆ.
ತೇಜ್ ಪ್ರತಾಪ್ ಅವರ ಸೂಚನೆಯಂತೆ ನೃತ್ಯ ಮಾಡಿದ್ದ ಸಿಬ್ಬಂದಿಯನ್ನು, ಶಾಸಕರ ಭದ್ರತಾ ಕರ್ತವ್ಯದಿಂದ ತೆರವುಗೊಳಿಸಲಾಗಿದೆ.
ಈ ಸಂಬಂಧ ಎಸ್‌ಎಸ್‌ಪಿ ಕಚೇರಿ ಭಾನುವಾರ ಹೇಳಿಕೆ ಬಿಡುಗಡೆ ಮಾಡಿದ್ದು, 'ಆರ್‌ಜೆಡಿ ನಾಯಕ ತೇಜ್ ಪ್ರತಾಪ್ ಯಾದವ್ ಅವರ ಭದ್ರತೆಗೆ ನಿಯೋಜನೆಗೊಂಡಿದ್ದ ಕಾನ್‌ಸ್ಟೇಬಲ್ ದೀಪಕ್ ಕುಮಾರ್ ಅವರು, ಸಮವಸ್ತ್ರದಲ್ಲಿದ್ದಾಗಲೇ ನೃತ್ಯ ಮಾಡಿದ್ದರು. ಹೀಗಾಗಿ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗಿದೆ. ಅವರನ್ನು ಪೊಲೀಸ್ ಕರ್ತವ್ಯಕ್ಕೆ ವಾಪಸ್ ಕಳುಹಿಸಲಾಗಿದೆ. ತೇಜ್ ಪ್ರತಾಪ್ ಅವರ ಭದ್ರತೆಗೆ ಮತ್ತೊಬ್ಬ ಕಾನ್‌ಸ್ಟೆಬಲ್ ಅನ್ನು ನಿಯೋಜಿಸಲಾಗುವುದು' ಎಂದು ತಿಳಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಹಾಗೂ ರಾಬ್ರಿ ದೇವಿ ದಂಪತಿಯ ಪುತ್ರ, ಸಮಸ್ತಿಪುರ ಜಿಲ್ಲೆಯ ಹಸನ್‌ಪುರ ಕ್ಷೇತ್ರದ ಶಾಸಕ ತೇಜ್ ಪ್ರತಾಪ್ ಅವರ ನಿವಾಸದಲ್ಲಿ ಶನಿವಾರ ಹೋಳಿ ಸಂಭ್ರಮಾಚರಣೆ ನಡೆದಿತ್ತು.
ಈ ವೇಳೆ ವೇದಿಕೆಯಲ್ಲಿ ಕುಳಿತಿದ್ದ ತೇಜ್ ಪ್ರತಾಪ್, ಸ್ಥಳದಲ್ಲಿದ್ದ ದೀಪಕ್ ಕುಮಾರ್‌ಗೆ ನೃತ್ಯ ಮಾಡುವಂತೆ ಸೂಚಿಸಿದ್ದರು. ನೃತ್ಯ ಮಾಡದಿದ್ದರೆ ಅಮಾನತು ಮಾಡುವುದಾಗಿ ಬೆದರಿಸಿದ್ದರು. ಹೀಗಾಗಿ, ಅವರು ನೃತ್ಯ ಮಾಡಿದ್ದರು. ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ಶಾಸಕರ ನಡೆ ಬಗ್ಗೆ ರಾಜಕೀಯ ವಲಯ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ.