ಕಾಸರಗೋಡು: ಮಧೂರು ಶ್ರೀ ಮದನಂತೇಶ್ವರ ಸಿದ್ದಿವಿನಾಯಕ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ಮೂಡಪ್ಪ ಸೇವಾ ಸಮಿತಿಯ ಮೊಗ್ರಾಲ್ ಪುತ್ತೂರು ಪ್ರಾದೇಶಿಕ ಸಮಿತಿಯ ಸಭೆಯು ಎರಿಯಾಕೋಟ ಶ್ರೀ ಭಗವತೀ ದೇವಸ್ಥಾನ ಸಭಾಂಗಣದಲ್ಲಿ ಜರಗಿತು. ಮಾ. 27ರಂದು ನಡೆಯಲಿರುವ ಪಂಚಾಯತ್ ಮಟ್ಟದ ಹೊರೆ ಕಾಣಿಕೆ ಸಮರ್ಪಣೆ ಹಾಗೂ ಚೌಕಿ ಯಿಂದ ಉಳಿಯತ್ತಡ್ಕದ ವರೆಗಿನ ರಸ್ತೆ ಬದಿ ಅಲಂಕಾರದ ಬಗ್ಗೆ ಚರ್ಚಿಸಿ ವಿವಿಧ ತೀರ್ಮಾನಗಳನ್ನು ಕೈಗೊಳ್ಳಲಾಯಿತು.
ಮಾ27 ರಂದು ಸಂಜೆ ಗಂಟೆ 3.30 ಕಾವುಗೋಳಿ ಶಿವಕ್ಷೇತ್ರ ಸನ್ನಿಧಿಯಲ್ಲಿ ಪ್ರಾರ್ಥನೆಯೊಂದಿಗೆ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆಗೆ ಚಾಲನೆನೀಡಲಾಗುವುದು.
ಕಾವುಗೊಳಿ ವಿಭಾಗದ ಕಲ್ಲಂಗೈ ಎರಿಯಕೋಟ, ಚೌಕಿ ಕಡಪರ,ಕೋರುವೈಲು,ಗುಡ್ಡೆ ದೇವಸ್ಥಾನ, ಕೆ ಕೆ ಪುರಂ, ಕಾಂತಿಕೆರೆ, ಬುಳ್ಳಾರ್ಕೋಡು, ರಕ್ತೇಶ್ವರಿ ಗುಡ್ಡೆ, ಪಾಯಿಚಾಲು, ಶಿವಮಂಗಿಲ, ಪೆರ್ನಡ್ಕ, ಪೆರಿಯಡ್ಕ ಮುಂತಾದ ಪ್ರದೇಶಗಳ ದೇವಸ್ಥಾನ ಮಂದಿರ ಸಂಘ ಸಂಸ್ಥೆಗಳು ತರವಾಡು ಮನೆಯವರು ಪೆರ್ನಡ್ಕ ಭಂಡಾರ ಮನೆ ಬಳಿ 27ರ ಸಂಜೆ 3.30 ಗಂಟೆಗೆ ಮುಂಚಿತವಾಗಿ ತಲುಪಿಸುವಂತೆ ಸೂಚನೆ ನೀಡಲಾಗಿದೆ.
ಬೆದ್ರಡ್ಕ ವಿಭಾಗದ ಪುತ್ತೂರು ಕೊಟ್ಯ, ಅರಣೆಗುಡ್ಡೆ ಸೇರಿದಂತೆ ವಿವಿಧ ಪ್ರದೇಶಗಳ ಹೊರೆಕಾಣಿಕೆಯನ್ನು ಪೆರ್ನಡ್ಕ ಭಂಡಾರ ಮನೆ ಬಳಿ ತಲಪಿಸಿ, ಅಲ್ಲಿಂದ 4 ಗಂಟೆಗೆ ಮೊಗ್ರಾಲ್ ಪುತ್ತೂರು ಗ್ರಾಮ ಪಂಚಾಯತ್ ಪ್ರಾದೇಶಿಕ ಸಮಿತಿಯ ವೈಭವದ ಹಸಿರುವಾಣಿ ಹೊರೆ ಕಾಣಿಕೆ ಮೆರವಣಿಗೆ ಆರಂಭಗೊಳ್ಳಲಿದೆ. ಅತ್ಯಾಕರ್ಷಕ ಮೆರವಣಿಗೆಗೆ, ಮುತ್ತು ಕೊಡೆಗಳ ಮಹಿಳಾ ಸಮವಸ್ತ್ರಧಾರಿಗಳು, ಸಿಂಗಾರಿ ಮೇಳ,ಭಜನಾ ಸಂಕೀರ್ತನಾ ತಂಡಗಳು, ಕುಣಿತ ಭಜನಾ ತಂಡಗಳು, ಭಾರತಮಾತೆ, ಶಿವ ಪರಿವಾರ,ಯಕ್ಷಗಾನ, ಭರತನಾಟ್ಯ,ಮೋಹಿನಿಯಾಟಂ ವೇಷಧಾರಿಗಳು ವಿವಿಧ ಸಂಘ ಸಂಸ್ಥೆಗಳ ಸಮವಸ್ತ್ರ ಧರಿಸಿದ ಮಹಿಳೆಯರು, ಕೇಸರಿ ದೋತಿ ಬಿಳಿ ಅಂಗಿ ಧರಿಸಿದ ಮಹನೀಯರು ಒಂದುಸಾವಿರ ಮಂದಿ ಮೆರಗು ನೀಡುವರು. ಚೌಕಿ ಯಿಂದ ಉಳಿಯತ್ತಡ್ಕದ ವರೆಗಿನ ರಸ್ತೆ ಬದಿ ಅಲಂಕಾರದ ಬಗ್ಗೆ ವಿವಿಧ ಕ್ಲಬ್ ಹಾಗೂ ಸಂಘ ಸಂಸ್ಥೆಗಳ ಹಾಗೂ ದಾನಿಗಳ ನೆರವಿನೊಂದಿಗೆ ಪೂರ್ತಿಗೊಳಿಸಲು ತೀರ್ಮಾನಿಸಲಾಯಿತು.
ಪಂಚಾಯತ್ ಸಮಿತಿ ಅಧ್ಯಕ್ಷ ಪದ್ಮನಾಭನ್ ಎರಿಯಾಕೋಟ ಅದ್ಯಕ್ಷತೆ ವಹಿಸಿದ್ದರು. ಕೇಂದ್ರ ಸಮಿತಿಯ ಹೊರೆ ಕಾಣಿಕೆ ವಿಭಾಗದ ಪ್ರಮುಖರಾದ ಶ್ರೀ ರವೀಂದ್ರ ರೈ ಸಿರಿಬಾಗಿಲು ಸಮಿತಿ ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ.ಬಿ ಆಚಾರ್ ಕಂಬಾರು, ಗ್ರಾಮ ಪಂಚಾಯಿತಿ ಸದಸ್ಯರಾದ ಪ್ರಮೀಳಾ ಮಜಲ್, ಕೆ.ಪಿ ಸಂಪತ್ ಕುಮಾರ್ ,ಪಂಚಾಯತ್ ಸಮಿತಿ ಪ್ರಮುಖರಾದ ಗಣೇಶ್ ನಾಯಕ್ ಬಳ್ಳೂರು, ಉಮೇಶ್ ಕಡಪ್ಪರ, ಶ್ರೀನಿ ಕೊರುವೈಲು ಮೊದಲದವರು ಉಪಸ್ಥಿತರಿದ್ದರು.


