ಕನ್ಯಾಕುಮಾರಿ: ಇಸ್ರೋ (ಭಾರತೀಯ ಬಾಹ್ಯಾಕಾಶ ಸಂಸ್ಥೆ) ಶೀಘ್ರವೇ ಎರಡು ಹೊಸ ಉಪಗ್ರಹ ಉಡಾವಣಾ ಕೇಂದ್ರಗಳನ್ನು ಹೊಂದಲಿದೆ ಎಂದು ಇಸ್ರೋ ಅಧ್ಯಕ್ಷ ವಿ.ನಾರಾಯಣನ್ ಮಾಹಿತಿ ನೀಡಿದ್ದಾರೆ.
2 ಹೊಸ ಕೇಂದ್ರಗಳ ಪೈಕಿ ಒಂದನ್ನು ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿ, ಮತ್ತೊಂದನ್ನು ತಮಿಳುನಾಡಿನ ಕುಲಶೇಖರ್‌ಪಟ್ಟಿಣಂದಲ್ಲಿ ನಿರ್ಮಾಣ ಮಾಡಲಾಗುತ್ತಿದೆ.
ಈ ಎರಡು ಕೇಂದ್ರಗಳು ಮುಂದಿನ 2 ವರ್ಷಗಳಲ್ಲಿ ಕಾರ್ಯಾಚರಣೆ ಮಾಡಲಿವೆ ಎಂದು ತಿಳಿಸಿದ್ದಾರೆ. ಇದೇ ವೇಳೆ, ಚಂದ್ರಯಾನ-4 ಯೋಜನೆ ಬಗ್ಗೆ ಮಾಹಿತಿ ನೀಡಿದ್ದು, ಇದು 9200 ಕೆ.ಜಿ. ತೂಕದ್ದಾಗಿದೆ ಮತ್ತು ಚಂದ್ರನಲ್ಲಿನ ಸ್ಯಾಂಪಲ್‌ಗಳನ್ನು ಪರೀಕ್ಷಿಸುವ ಪ್ರಾಥಮಿಕ ಧ್ಯೇಯವನ್ನು ಹೊಂದಿದೆ ಎಂದರು.
ಹವಾಮಾನ ಅಧ್ಯಯನಕ್ಕಾಗಿ ಜಿ-20 ಉಪಗ್ರಹವನ್ನು ವಿನ್ಯಾಸಗೊಳಿಸುತ್ತಿದ್ದು, ಇಸ್ರೋ ಆ ಉಪಗ್ರಹ ಮೇಲೆ ಗಮನಹರಿಸಿದೆ. ಅದರ ಪೇಲೋಡ್‌ನ ಶೇ.40 ಭಾಗ ಭಾರತದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಕಳೆದ ದಶಕದಲ್ಲಿ ಇಸ್ರೋ ಗಮನಾರ್ಹ ಸಾಧನೆಗಳ ಮಾಡಿದ್ದು, ಭಾರತೀಯ ನಿರ್ಮಿತ ರಾಕೆಟ್‌ಗಳ ಬಳಸಿ 34 ದೇಶಗಳ 433 ಉಪಗ್ರಹಗಳ ಉಡಾವಣೆ ಮಾಡಲಾಗಿದೆ ಎಂದು ಇಸ್ರೋ ಮುಖ್ಯಸ್ಥರು ಹೇಳಿದರು.
ಮಹಿಳೆಯರಿಗೆ ಆದ್ಯತೆ:
ಇಸ್ರೋ ಸಂಸ್ಥೆಯಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡುವ ಬಗ್ಗೆ ಇಸ್ರೋ ಅಧ್ಯಕ್ಷ ನಾರಾಯಣನ್ ಪ್ರಸ್ತಾಪಿಸಿ, ಮಹಿಳಾ ವಿಜ್ಞಾನಿಗಳಿಗೆ ಸಮಾನ ಅವಕಾಶಗಳ ನೀಡುವ ಬಗ್ಗೆ ಹೇಳಿದರು. ಚಂದ್ರಯಾನ ಮತ್ತು ಮಾರ್ಸ್ ಆರ್ಬಿಟರ್ ಮಿಷನ್‌ನಂತಹ ಕಾರ್ಯಾಚರಣೆಗಳಲ್ಲಿ ಮಹಿಳೆಯರು ಪ್ರಮುಖ ಪಾತ್ರ ವಹಿಸಿದ್ದಾರೆ. ವೈವಿಧ್ಯತೆ ಮತ್ತು ಪ್ರತಿಭೆ ಆಧಾರಿತ ಗುರುತಿಸುವಿಕೆಗೆ ಇಸ್ರೋ ಬದ್ಧತೆಯ ಹೊಂದಿದೆ ಎಂದು ಹೇಳಿದರು.