ಅಲಿಗಢ: ಮಸೀದಿಯಲ್ಲಿ ನಡೆಯುವ ಪ್ರಾರ್ಥನೆಯಲ್ಲಿ ಸಕ್ರೀಯವಾಗಿದ್ದ ಹಿಂದೂ ಸಮುದಾಯಕ್ಕೆ ಸೇರಿದ ವರ್ತಕನ ವಿರುದ್ಧ ಬಲಪಂಥೀಯ ಸಂಘಟನೆಗಳು ವ್ಯಾಪಕ ವಿರೋಧ ವ್ಯಕ್ತಪಡಿಸಿವೆ. ಶುದ್ಧೀಕರಣಕ್ಕೆ ಒಳಗಾಗುವಂತೆ ವ್ಯಕ್ತಿಯನ್ನು ಒತ್ತಾಯಿಸಿವೆ.
ಸುನಿಲ್ ರಜನಿ ಎಂಬುವವರು ಎಲ್ಲಾ ಸಮುದಾಯಗಳೂ ಇರುವ ಭಂಜಾ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ.
ತಮ್ಮ ನೆರೆಹೊರೆಯ ಮುಸ್ಲಿಂ ಸ್ನೇಹಿತರೊಂದಿಗೆ ಸೇರಿ ಗುರುವಾರ ಸಂಜೆ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು. ಈ ದೃಶ್ಯಾವಳಿ ಸಾಮಾಜಿಕ ಮಾಧ್ಯಗಳಲ್ಲಿ ವ್ಯಾಪಕವಾಗಿ ಹರಿದಾಡಿತು.
ಮಸೀದಿಯಿಂದ ಹೊರ ಬರುತ್ತಲೇ ರಜನಿ ಅವರಿಗೆ ಎದುರಾದ ಹಿಂದೂ ಸಂಘಟನೆಗಳ ಕಾರ್ಯಕರ್ತರು, ಇದು ಪ್ರಚೋದನೆಯಾಗಿದ್ದು, ಗಂಗಾಜಲವನ್ನು ಪ್ರೋಕ್ಷಿಸಿಕೊಂಡು ಕೂಡಲೇ ಶುದ್ಧರಾಗುವಂತೆ ಸೂಚಿಸಿದ್ದಾರೆ.
'ಸುನಿಲ್ ಅವರದ್ದು ಧರ್ಮ ವಿರೋಧಿ ನಡೆಯಾಗಿದೆ. ಇದಕ್ಕಾಗಿ ಅವರು ಸಾರ್ವಜನಿಕರ ಕ್ಷೇಮೆ ಕೇಳಬೇಕು. ಜತೆಗೆ ದೇವಾಲಯದಲ್ಲಿ ಶುದ್ಧೀಕರಣ ಪ್ರಕ್ರಿಯೆಗೆ ಒಳಗಾಗಬೇಕು' ಎಂದು ಭಾರತೀಯ ಜನತಾ ಯುವ ಮೋರ್ಚಾದ ಸ್ಥಳೀಯ ಮುಖಂಡ ಮೋನು ಅಗರ್ವಾಲ್ ಆಗ್ರಹಿಸಿದ್ದಾರೆ.
ಈ ಘಟನೆ ಕುರಿತಂತೆ ದೂರು ದಾಖಲಾಗಿದೆ.