ಢಾಕಾ: 'ಭಾರತದಲ್ಲಿ ನೆಲೆಸಿರುವ ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರನ್ನು ದೇಶದ ಸುಪರ್ದಿಗೆ ಒಪ್ಪಿಸುವಂತೆ ಕೋರಿ ಬರೆದಿರುವ ಪತ್ರಕ್ಕೆ, ಭಾರತ ಸರ್ಕಾರದಿಂದ ಅಧಿಕೃತವಾಗಿ ಯಾವುದೇ ಪ್ರತಿಕ್ರಿಯೆ ಬಂದಿಲ್ಲ' ಎಂದು ಮಧ್ಯಂತರ ಸರ್ಕಾರದ ಮುಖ್ಯಸ್ಥರಾದ ಮೊಹಮ್ಮದ್ ಯೂನುಸ್ ಹೇಳಿದ್ದಾರೆ.
ಬ್ರಿಟನ್ ಮೂಲದ 'ಸ್ಕೈ ನ್ಯೂಸ್' ನೀಡಿರುವ ಸಂದರ್ಶನದಲ್ಲಿ ಅವರು, ಮಾನವೀಯತೆ ವಿರುದ್ಧದ ಅಪರಾಧಗಳಿಗೆ ಹಸೀನಾ ವಿಚಾರಣೆ ಎದುರಿಸಬೇಕಾಗಿದೆ ಎಂದು ಹೇಳಿದ್ದಾರೆ.
ಹಸೀನಾ ಅವರ ವಿರುದ್ಧವಷ್ಟೇ ಅಲ್ಲ, ಅವರ ಜೊತೆಗೆ ಗುರುತಿಸಿಕೊಂಡವರು, ಅವರ ಕುಟುಂಬ ಸದಸ್ಯರೂ ವಿಚಾರಣೆ ಎದುರಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ವಿದ್ಯಾರ್ಥಿ ಆಂದೋಲನದ ಪರಿಣಾಮ ಕಳೆದ ವರ್ಷ ಆಗಸ್ಟ್ 7ರಂದು ಪ್ರಧಾನಿ ಸ್ಥಾನದಿಂದ ಅಧಿಕಾರದಿಂದ ಪದಚ್ಯುತಗೊಂಡ ಬಳಿಕ ಹಸೀನಾ ಅವರು ಭಾರತದಲ್ಲಿ ನೆಲೆಸಿದ್ದಾರೆ.