HEALTH TIPS

ಬೋಲಿವಿಯಾ ದೇಶದ ಆದಿವಾಸಿಗಳ ಜಾಗದ ಮೇಲೆ ನಿತ್ಯಾನಂದನ ಕಣ್ಣು! ನಂತರ ಆಗಿದ್ದೇನು?

ಲಾಪಾಜ್‌: ಭಾರತ ತೊರೆದಿರುವ ಸ್ವಯಂ ಘೋಷಿತ ದೇವ ಮಾನವ ನಿತ್ಯಾನಂದ ಸ್ಥಾಪಿಸಿರುವ 'ಕೈಲಾಸ' ಎಂಬ ಕಾಲ್ಪನಿಕ ರಾಷ್ಟ್ರದ 20 ಸದಸ್ಯರನ್ನು ಗಡೀಪಾರು ಮಾಡಿರುವುದಾಗಿ ಬೊಲಿವಿಯಾ ಸರ್ಕಾರ ತಿಳಿಸಿದೆ.

'ಬೊಲಿವಿಯಾದ ಸ್ಥಳೀಯ ಜನರಿಗೆ ಸೇರಿದ ಜಾಗವನ್ನು ಕಬಳಿಸುವ ಹುನ್ನಾರ ನಡೆಸಿದ ಆರೋಪ ಇವರ ಮೇಲಿದೆ.

ಪ್ರವಾಸಿಗಳಾಗಿ 'ಕೈಲಾಸ'ದ ಕೆಲ ಸದಸ್ಯರು 2024ರ ನವೆಂಬರ್‌ನಲ್ಲಿ ಬೊಲಿವಿಯಾ ಪ್ರವೇಶಿಸಿದ್ದರು. ಇನ್ನೂ ಕೆಲವರು 2025ರ ಜನವರಿಯಲ್ಲಿ ಪ್ರವೇಶಿಸಿದ್ದರು' ಎಂದು ಬೊಲಿವಿಯಾದ ವಲಸೆ ವಿಭಾಗದ ನಿರ್ದೇಶಕಿ ಕ್ಯಾಥರಿನ್ ಕಾಲ್ಡೆರಾನ್‌ ಹೇಳಿರುವುದಾಗಿ ಅಲ್ಲಿನ ಪತ್ರಿಕೆ ಎಲ್‌ ಡೆಬೆರ್‌ ವರದಿ ಮಾಡಿದೆ.

ಹಲವು ಆಶ್ರಮಗಳನ್ನು ಹೊಂದಿರುವ ನಿತ್ಯಾನಂದ ಅವರ ಮೇಲೆ ಲೈಂಗಿಕ ದೌರ್ಜನ್ಯ ಹಾಗೂ ಶೋಷಣೆಯ ಆರೋಪವಿದೆ. 2019ರಲ್ಲಿ ಆಶ್ರಮದಲ್ಲಿ ಮಗುವಿನ ಅಪಹರಣ ಪ್ರಕರಣದ ತನಿಖೆಯನ್ನು ಗುಜರಾತ್‌ನ ಪೊಲೀಸರು ಕೈಗೊಂಡಿದ್ದರು. ಇದೇ ಸಂದರ್ಭದಲ್ಲಿ ನಿತ್ಯಾನಂದ ತಲೆಮರಿಸಿಕೊಂಡಿದ್ದರು. ಇದಾದ ಬೆನ್ನಲ್ಲೇ, ತಾನೊಂದು ಅಪರಿಚಿತ ಪ್ರದೇಶದಲ್ಲಿ 'ಕೈಲಾಸ'ವನ್ನು ಕಂಡುಹಿಡಿದಿರುವುದಾಗಿ ಘೋಷಿಸಿಕೊಂಡಿದ್ದರು. ಈಕ್ವೆಡಾರ್‌ನ ಒಂದು ದ್ವೀಪದಲ್ಲಿ ಇರುವ ಶಂಕೆ ಇದೆ ಎಂದು ವರದಿಯಾಗಿದೆ.

'ಕೈಲಾಸ'ಕ್ಕಾಗಿ ಬೊಲಿವಿಯಾದ ಆದಿವಾಸಿ ಸಮುದಾಯಕ್ಕೆ ಸೇರಿದ ಮೂವರು 4.8 ಲಕ್ಷ ಹೆಕ್ಟೇರ್‌ ಪ್ರದೇಶವನ್ನು ಒಂದು ಸಾವಿರ ವರ್ಷಗಳಿಗೆ ಗುತ್ತಿಗೆ ಆಧಾರದಲ್ಲಿ ನೀಡುವ ಒಪ್ಪಂದಕ್ಕೆ ಸಹಿ ಹಾಕಿದ್ದರು. ಇದರ ಪ್ರಕಾರ 'ಕೈಲಾಸ ಸಂಯುಕ್ತ ರಾಷ್ಟ್ರ'ದಲ್ಲಿ ಇರುವ ಎಲ್ಲಾ ಸಂಪತ್ತಿನ ಮೇಲಿನ ಹಕ್ಕನ್ನು ಹೊಂದುವ ಹಾಗೂ ಪ್ರದೇಶದ ಮೇಲೆ ಸಂಪೂರ್ಣ ಸ್ವಾಯತ್ತತೆ ಇರಲಿದೆ ಎಂದಿದೆ. ಇದಕ್ಕಾಗಿ ವಾರ್ಷಿಕ ₹92 ಲಕ್ಷ ಪಾವತಿಸುವ ಕರಾರಿಗೆ 'ಕೈಲಾಸ ಸಂಯುಕ್ತ ರಾಷ್ಟ್ರ' ಹಾಗೂ ಸ್ಥಳೀಯರು ಸಹಿ ಹಾಕಿದ್ದರು. ಇದನ್ನು ಎಲ್‌ ಡೆಬೆರ್ ಪತ್ರಿಕೆ ಮಾರ್ಚ್‌ 16ರಂದು ವರದಿ ಮಾಡಿತ್ತು.

'ಸಿಲ್ವಾನಾ ವಿನ್ಸೆಂಟಿ ಎಂಬುವವರು ಮಾಡಿದ ಈ ವರದಿ ಆಧರಿಸಿ ಬೊಲಿವಿಯಾ ಸರ್ಕಾರ ಈ ಕ್ರಮ ಕೈಗೊಂಡಿದೆ. ಇವರಿಗೆ ಸ್ಥಳೀಯ ಹಾಗೂ ವಿದೇಶಗಳ ಮೊಬೈಲ್ ಸಂಖ್ಯೆಯಿಂದಲೂ ಬೆದರಿಕೆ ಕರೆ ಬಂದ ಬಗ್ಗೆ ದೂರು ದಾಖಲಾಗಿದೆ. ಕಾಲ್ಪನಿಕ ದೇಶವೊಂದರ ಜತೆ ಯಾವುದೇ ಒಪ್ಪಂದ ಮಾಡಿಕೊಳ್ಳಲು ಬೊಲಿವಿಯಾದ ಯಾವುದೇ ನಾಗರಿಕರಿಗೂ ಹಕ್ಕಿಲ್ಲ. ಜತೆಗೆ ಬೊಲಿವಿಯಾದ ಕೃಷಿ ಮತ್ತು ನೆಲ ಅಭಿವೃದ್ಧಿ ಕಾನೂನಿನ್ವಯ ಅಮೆಜಾನ್ ಪ್ರಾಂತ್ಯದಲ್ಲಿ ಯಾವುದೇ ವಿದೇಶಿಯರಿಗೆ ಜಮೀನು ಪಡೆಯುವ ಹಕ್ಕಿಲ್ಲ' ಎಂದು ಅಲ್ಲಿನ ಸಚಿವ ಯಾಮಿಲ್ ಎಲೋನ್ಸ್ ಹೇಳಿದ್ದಾರೆ.

'ಈ ಪಂಥವು ನಮ್ಮ ದೇಶಕ್ಕೆ ಬಂದು ಸ್ಥಳೀಯರ ಉತ್ತಮ ನಂಬಿಕೆಗಳನ್ನು ಹಾಗೂ ಅವರ ಹಕ್ಕುಗಳನ್ನು ಉಲ್ಲಂಘಿಸುವ ಯತ್ನ ನಡೆಸಿದೆ. ಬೊಲಿವಿಯಾದ ಜಾಗವನ್ನು ಮೋಸದಿಂದ ಕಬಳಿಸುವ ಹುನ್ನಾರವನ್ನು ಈ ಪಂಥ ನಡೆಸಿದೆ. ಗಡೀಪಾರಾಗಿರುವ 20 ಜನರು, ಬೊಲಿವಿಯಾಗೆ ಬಂದ ಕಾರಣವನ್ನು ತಿಳಿಸಿಲ್ಲ. ಅಕ್ರಮವಾಗಿ ದೇಶದಲ್ಲಿ ನೆಲೆಸಿದ್ದಾರೆ. ಇವರಿಗೆ ಕಡ್ಡಾಯವಾಗಿ ದೇಶ ತೊರೆಯುವಂತೆ ನೋಟಿಸ್ ನೀಡಲಾಗಿದೆ. ಇದೇ ವಾರಾಂತ್ಯದಲ್ಲಿ ಈ ಕ್ರಮ ಜಾರಿಗೆ ತರಲಾಗುವುದು' ಎಂದಿದ್ದಾರೆ.

''ಕೈಲಾಸ' ಎಂಬ ಕಾಲ್ಪನಿಕ ರಾಷ್ಟ್ರದೊಂದಿಗೆ ಬೊಲಿವಿಯಾ ಸರ್ಕಾರ ಯಾವುದೇ ಒಪ್ಪಂದ ಮಾಡಿಕೊಂಡಿಲ್ಲ. ಜತೆಗೆ ಯಾವುದೇ ಸಂಬಂಧವನ್ನೂ ಹೊಂದಿಲ್ಲ' ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

ನಿತ್ಯಾನಂದ ವಿರುದ್ಧ ಅವರ ಚಾಲಕ ಲೆನಿನ್ ಎಂಬುವವರು ಸಲ್ಲಿಸಿದ್ದ ದೂರಿನ ಆಧಾರದ ಮೇಲೆ 2010ರಲ್ಲಿ ಕರ್ನಾಟಕದ ಸೆಷನ್ಸ್ ನ್ಯಾಯಾಲಯವು ಜಾಮೀನು ರಹಿತ ವಾರೆಂಟ್ ಹೊರಡಿಸಿತ್ತು. ನಂತರ ಬಂಧನವೂ ಆಯಿತು. ಆದರೆ ಜಾಮೀನಿನ ಮೇಲೆ ನಿತ್ಯಾನಂದ ಅವರನ್ನು ನ್ಯಾಯಾಲಯ ಬಿಡುಗಡೆ ಮಾಡಿತ್ತು. ಇದಾದ ನಂತರ ನಿತ್ಯಾನಂದ ದೇಶ ತೊರೆದಿದ್ದಾರೆ ಎಂದು ಲೆನಿನ್ ಅವರು ಸಲ್ಲಿಸಿದ ಮನವಿ ಆಧರಿಸಿ 2020ರಲ್ಲಿ ಜಾಮೀನನ್ನು ನ್ಯಾಯಾಲಯ ರದ್ದುಗೊಳಿಸಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries