ಅಯೋಧ್ಯೆ: ಕಾಂಗ್ರೆಸ್‌ನ ರಾಜ್ಯಸಭಾ ಸದಸ್ಯ ದಿಗ್ವಿಜಯ ಸಿಂಗ್‌ಗೆ ಸೇರಿದ ಉತ್ತರ ಪ್ರದೇಶದ ಅಂಬೇಡ್ಕರ್‌ನಗರ ಜಿಲ್ಲೆಯಲ್ಲಿದ್ದ ಜಮೀನನ್ನು ವಂಚಕರು ಮಾರಾಟ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉಸ್ತುವಾರಿ ಅನಿಲ್ ಯಾದವ್ ಅವರು ಶುಕ್ರವಾರ ಭೂಮಿಯಲ್ಲಿ ನಿರ್ಮಾಣ ಕಾಮಗಾರಿಯನ್ನು ಗಮನಿಸಿದಾಗ ವಂಚನೆ ಬೆಳಕಿಗೆ ಬಂದಿದೆ.
ನಂತರ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಹಾಗೂ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.
ಅಲಾಪುರ್ ತಹಸಿಲ್‌ನ ರಾಮನಗರ ಮಹುವರ್ ಗ್ರಾಮದಲ್ಲಿ 0.152 ಹೆಕ್ಟೇರ್ ಜಮೀನು (ಪ್ಲಾಟ್ ಸಂಖ್ಯೆ 1335 ಕೆ) ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಸಿಂಗ್ ಅವರ ಹೆಸರಿನಲ್ಲಿ ನೋಂದಾಯಿಸಲಾಗಿದೆ.
1986ರಲ್ಲಿ ನಿಧನರಾದ ಸಿಂಗ್ ಅವರ ತಾಯಿ ಅಪರ್ಣಾ ದೇವಿ ಅವರ ಹೆಸರಿನಲ್ಲಿ ಭೂಮಿ ನೋಂದಾಯಿಸಲಾಗಿತ್ತು. ಸಿಂಗ್ ನಂತರ ಉತ್ತರಾಧಿಕಾರಕ್ಕಾಗಿ ಅರ್ಜಿ ಸಲ್ಲಿಸಿದ್ದರು. 2024ರ ಮೇ 18ರಂದು ಅವರ ಹೆಸರಿಗೆ ನೋಂದಾಯಿಸಲಾಗಿತ್ತು ಎಂದು ಯಾದವ್ ಹೇಳಿದ್ದಾರೆ.
ತಾನೇ ದಿಗ್ವಿಜಯ ಸಿಂಗ್ ಎಂದು ಹೇಳಿಕೊಂಡು ಆಲಾಪುರ್ ತಹಸಿಲ್‌ನ ಕೆವ್ತಾಲಿ ಗ್ರಾಮದ ನಿವಾಸಿ ರಾಮ್ ಹರಕ್ ಚೌಹಾಣ್ ಎಂಬಾತ ನಿವೃತ್ತ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಿಯಾಲಾಲ್ ಮತ್ತು ರಾಮನಗರ ಮಹುವರ್ ನಿವಾಸಿಗಳಾದ ರಾಜ್‌ಬಹದ್ದೂರ್ ಹಾಗೂ ಮಂಗ್ಲಿ ಅವರಿಗೆ ಭೂಮಿಯನ್ನು ಮಾರಾಟ" ಮಾಡಿದ್ದಾನೆ ಎಂದು ಉಸ್ತುವಾರಿ ಪೊಲೀಸ್ ಮತ್ತು ತಹಸಿಲ್ ಆಡಳಿತಕ್ಕೆ ನೀಡಿದ ದೂರುಗಳಲ್ಲಿ ಆರೋಪಿಸಿದ್ದಾರೆ.
ಖರೀದಿದಾರರ ಕುಟುಂಬ ಶುಕ್ರವಾರದಿಂದ ಇಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭಿಸಿತ್ತು. ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಸ್ಥಳಿಯಾಡಳಿತ ಸ್ಥಗಿತಗೊಳಿಸಿದ್ದು, ತನಿಖೆ ಆದೇಶಿಸಿದೆ.
ಭೂಮಿ ಇನ್ನೂ ಸಿಂಗ್ ಹೆಸರಿನಲ್ಲಿ ನೋಂದಣಿಯಾಗಿದೆ ಎಂದು ಅಲಾಪುರ್ ತಹಸಿಲ್ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ.