ಮುಖ್ವಾ : ಪ್ರಧಾನಿ ನರೇಂದ್ರ ಮೋದಿ ಅವರು ಇಂದು(ಗುರುವಾರ) ಉತ್ತರಾಖಂಡದ ಮುಖ್ವಾ ದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.
ಹಲವು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡುವ ಉದ್ದೇಶದಿಂದ ಪ್ರಧಾನಿ ಮೋದಿ ಅವರು ಇಂದು ಉತ್ತರಾಖಂಡಕ್ಕೆ ಭೇಟಿ ನೀಡಿದ್ದಾರೆ.
ಮೊದಲಿಗೆ ಟ್ರಕ್ ಮತ್ತು ಬೈಕ್ ರ್‍ಯಾಲಿಗೆ ಚಾಲನೆ ನೀಡಲಿರುವ ಪ್ರಧಾನಿ ಮೋದಿ ಅವರು ತದನಂತರ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಮೋದಿ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡಿರುವ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, 'ಆಧ್ಯಾತ್ಮಿಕ ಮತ್ತು ನೈಸರ್ಗಿಕ ಸೌಂದರ್ಯಕ್ಕೆ ಹೆಸರುವಾಸಿಯಾಗಿರುವ ಉತ್ತರಾಖಂಡಕ್ಕೆ ಪ್ರಧಾನಿ ಅವರನ್ನು ಸ್ವಾಗತಿಸುತ್ತಿದ್ದೇನೆ' ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ರಾಜ್ಯದಲ್ಲಿ ಒಟ್ಟು ₹6,811 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಎರಡು ರೋಪ್‌ವೇ ಯೋಜನೆಗಳಿಗೆ ಕೇಂದ್ರ ಸರ್ಕಾರವು ಬುಧವಾರ ಅನುಮೋದನೆ ನೀಡಿತ್ತು. ಸೋನ್‌ಪ್ರಯಾಗ್‌ನಿಂದ ಕೇದಾರನಾಥ (12.9 ಕಿಮೀ) ಮತ್ತು ಗೋವಿಂದಘಾಟ್‌ನಿಂದ ಹೇಮಕುಂಡ್ ಸಾಹಿಬ್ ಜಿ (12.4 ಕಿಮೀ) ನಡುವೆ ಈ ರೋಪ್ ವೇ ನಿರ್ಮಾಣವಾಗಲಿವೆ.
ಪ್ರವಾಸೋದ್ಯಮಕ್ಕೆ ಒತ್ತು:
ಉತ್ತರಾಖಂಡ ಸರ್ಕಾರವು ಚಳಿಗಾಲದ ಪ್ರವಾಸೋದ್ಯಮ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದು, ಸಾವಿರಾರು ಭಕ್ತರು ಗಂಗೋತ್ರಿ, ಯಮುನೋತ್ರಿ, ಕೇದಾರನಾಥ ಮತ್ತು ಬದರಿನಾಥಕ್ಕೆ ಭೇಟಿ ನೀಡುತ್ತಿದ್ದಾರೆ.
ಈ ಕಾರ್ಯಕ್ರಮವು ಧಾರ್ಮಿಕ ಪ್ರವಾಸೋದ್ಯಮವನ್ನು ಮತ್ತು ಸ್ಥಳೀಯ ಆರ್ಥಿಕತೆ, ಹೋಂಸ್ಟೇಗಳು, ಪ್ರವಾಸೋದ್ಯಮ ವ್ಯವಹಾರಗಳನ್ನು ಉತ್ತೇಜಿಸುವ ಗುರಿ ಹೊಂದಿದೆ ಎಂದು ಸರ್ಕಾರ ತಿಳಿಸಿದೆ.