ಟೊರೊಂಟೊ: ಕೆನಡಾದ ನೂತನ ಪ್ರಧಾನಿಯಾಗಿ ಮಾರ್ಕ್ ಕಾರ್ನಿ ಶುಕ್ರವಾರ ಪ್ರಮಾಣವಚನ ಸ್ವೀಕರಿಸಿದರು. ಪ್ರಧಾನಿಯಾಗಿದ್ದ ಜಸ್ಟಿನ್ ಟ್ರುಡೊ ಅವರು ಕಳೆದ ಜನವರಿ ತಿಂಗಳಲ್ಲಿ ರಾಜೀನಾಮೆ ನೀಡಿದ್ದರು. ಆಡಳಿತಾರೂಢ ಲಿಬರಲ್ ಪಾರ್ಟಿ ನಾಯಕರಾಗಿ ಕಾರ್ನಿ ಇತ್ತೀಚೆಗೆ ಆಯ್ಕೆಯಾಗಿದ್ದರು.
ಕಾರ್ನಿ ಅವರು ಈ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷದ ಸಾರಥ್ಯ ವಹಿಸುವುದರ ಜೊತೆಗೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮುಂದಿಟ್ಟಿರುವ ವಾಣಿಜ್ಯ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ದೇಶವನ್ನು ಮುನ್ನಡೆಸಲಿದ್ದಾರೆ.
59 ವರ್ಷ ವಯಸ್ಸಿನ ಕಾರ್ನಿ ಅವರು, 'ನಾವು ಎಂದಿಗೂ ಅಮೆರಿಕ ಸಂಯುಕ್ತ ಸಂಸ್ಥಾನದ ಭಾಗವಾಗುವುದಿಲ್ಲ. ಅಮೆರಿಕ, ಕೆನಡಾ ಅಲ್ಲ. ಕೆನಡಾ ಎಂದಿಗೂ ಮೂಲಭೂತವಾಗಿ ವಿಭಿನ್ನವಾದ ರಾಷ್ಟ್ರ' ಎಂದು ಘೋಷಿಸಿದರು.
ಕೆನಡಾವು ಅಮೆರಿಕ ಸಂಯುಕ್ತ ಸಂಸ್ಥಾನದ 51ನೇ ರಾಜ್ಯವಾಗಬೇಕು ಎಂದು ಪ್ರತಿಪಾದಿಸುತ್ತಿರುವ ಡೊನಾಲ್ಡ್ ಟ್ರಂಪ್ ಅವರು, ಕೆನಡಾ ವಿರುದ್ಧ ಆರ್ಥಿಕ ಯುದ್ಧ ಸಾರಿದ್ದಾರೆ. ಇದನ್ನು ಎದುರಿಸಬೇಕಾದ ಸವಾಲು ಲಿಬರಲ್ ಪಾರ್ಟಿಯ ಹೊಸ ನಾಯಕತ್ವದ ಮುಂದಿದೆ.
'ಕೆನಡಾದ ಸಾರ್ವಭೌಮತೆಗೆ ಗೌರವ ನೀಡುವುದಾದರೆ ಟ್ರಂಪ್ ಭೇಟಿಗೆ ತಾವು ಸಿದ್ಧ. ಸದ್ಯಕ್ಕೆ ವಾಷಿಂಗ್ಟನ್‌ಗೆ ಭೇಟಿ ನೀಡುವ ಯಾವುದೇ ಚಿಂತನೆ ಇಲ್ಲ. ಶೀಘ್ರದಲ್ಲಿ ಟ್ರಂಪ್ ಅವರಿಗೆ ದೂರವಾಣಿ ಕರೆ ಮಾಡಿ ಮಾತನಾಡುತ್ತೇನೆ' ಎಂದು ಕಾರ್ನಿ ತಿಳಿಸಿದರು.
'ಟ್ರಂಪ್ ಅವರು ಯಶಸ್ವಿ ಉದ್ಯಮಿ. ನಾವು ಹಲವು ಉದ್ಯಮ ಕ್ಷೇತ್ರಗಳಲ್ಲಿ ಕೆನಡಾ ಗ್ರಾಹಕ ಸ್ಥಾನದಲ್ಲಿದೆ. ಗ್ರಾಹಕರು ಎಂದಿಗೂ ಗೌರವ ಬಯಸುತ್ತಾರೆ ಮತ್ತು ಸರಿಯಾದ ರೀತಿಯಲ್ಲಿ ವ್ಯವಹರಿಸಬೇಕು ಎಂದು ಬಯಸುತ್ತಾರೆ' ಎಂದು ಸೂಚ್ಯವಾಗಿ ತಮ್ಮ ನಿಲುವು ಸ್ಪಷ್ಟಪಡಿಸಿದರು.