ಕಾಸರಗೋಡು: ಜಿಲ್ಲೆಯ ನಾನಾ ಕಡೆ ಅಡಕೆ ಕೃಷಿಗೆ ಬಾಧಿಸುತ್ತಿರುವರೋಗಗಳ ಬಗ್ಗೆ ಅಧ್ಯಯನ ನಡೆಸಿ, ಅವುಗಳಿಗೆ ಪರಿಹಾರ ಕಂಡುಕೊಳ್ಳಲು ಹಾಗೂ ನಾಶ ನಷ್ಟ ಅಂದಾಜಿಸಲು ತಜ್ಞರ ತಂಡ ರಚಿಸಲಾಗುವುದು ಎಂದು ಕೇರಳ ಕೃಷಿ ಸಚಿವ ಪಿ. ಪ್ರಸಾದ್ ತಿಳಿಸಿದ್ದಾರೆ.
ಅವರು ತಿರುವನಂತಪುರದ ವಿಧಾನಸಭಾ ಕಾನ್ಫರೆನ್ಸ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಜಂಟಿ ಸಭೆಯಲ್ಲಿ ಮಾತನಾಡಿದರು.
ಇದಕ್ಕೆ ಕೇಂದ್ರ ತೋಟಗಾರಿಕಾ ಬೆಳೆಗಳ ಸಂಶೋಧನಾ ಕೇಂದ್ರ(ಸಿಪಿಸಿಆರ್‍ಐ), ಕೃಷಿ ವಿಶ್ವ ವಿದ್ಯಾಲಯ, ಕೃಷಿ ವಿಜ್ಞಾನ ಕೇಂದ್ರಗಳ ವಿಜ್ಞಾನಿಗಳನ್ನೊಳಗೊಂಡ ತಂಡ ನೇತೃತ್ವ ವಹಿಸಲಿದ್ದಾರೆ. ಅಡಕೆ ಕೃಷಿ ವಲಯದಲ್ಲಿನ ನಾಶನಷ್ಟದ ಲೆಕ್ಕಾಚಾರ ಸಂಗ್ರಹಿಸಲಾಗುವುದು. ಇದರ ಆಧಾರದಲ್ಲಿ ಆರ್ಥಿಕ ಸಹಾಯ ಲಭ್ಯವಾಗಿಸುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು. ಕೇರಳ ಸರ್ಕಾರದ ಯೋಜನೆಗಳ ಮೂಲಕವೂ ಪರಿಹಾರ ಕ್ರಮ ಕೈಗೊಳ್ಳಲಾಗುವುದು. ಹವಾಮಾನ ಆಧಾರಿತ ವಿಮ ಯೋಜನೆಗೆ ಸಂಬಂಧಿಸಿ ಕ್ರಷಿಕರ ಮಧ್ಯೆ ತಿಳಿವಳಿಕೆ ಮೂಡಿಸಲಾಗುವುದು, ಅಲ್ಲದೆ ಯೋಜನೆಯ ಸೌಲಭ್ಯ ಕೃಷಿಕರಿಗೆ ಲಭಿಸುವ ರೀತಿಯಲ್ಲಿ ಶಿಬಿರ ನಡೆಸಲಾಗುವುದು. ಜನಪರ ಯೋಜನೆಗಳಲ್ಲಿ ಆಯಾ ಪ್ರದೇಶಕ್ಕೆ ಅಗತ್ಯವುಳ್ಳ ಪ್ರತಿರೋಧ ಕ್ರಮಗಳಿಗನುಸಾರವಾಗಿ ಯೋಜನೆ ತಯಾರಿಸಬೇಕು ಅಲ್ಲದೆ ರೋಗ ನಿಯಂತ್ರಣಕ್ಕೆ ಪರಿಹಾರೋಪಾಯ ಕಂಡುಕೊಳ್ಳುವುದರೊಂದಿಗೆ ಮಣ್ಣು ಹಾಗೂ ಅಡಕೆ ಮರಗಳ ಸಂರಕ್ಷಣೆಗಾಗಿ ಜೈವಿಕ ಗೊಬ್ಬರಗಳಿಗೆ ಪ್ರಾಧಾನ್ಯತೆ ನೀಡಲಾಗುವುದು. ಅಡಕೆ ಮರಗಳಿಗೆ ತಗಲುವ ರೋಗ ನಿಯಂತ್ರಣಕ್ಕೆ ಹೊಸ ವಿಧಾನ ಅಳವಡಿಸಿಕೊಳ್ಳುವ ಬಗ್ಗೆಯೂ ಪರಿಶೀಲಿಸಲಾಗುವುದು ಎಂದು ತಿಳಿಸಿದರು.
ಅಡಕೆ ಕೃಷಿಕರ ಸಾಲ ಬಾಧ್ಯತೆ ಹಾಗೂ ಸಾಲ ಮರುಪಾವತಿ ಕಾಲಾವಧಿಗೆ ಸಂಬಂಧಿಸಿ ಮೊರಟೋರಿಯಂ ಘೋಷಿಸಲು ಹಣಕಾಸು ಇಲಾಖೆಗೆ ಅನುಮತಿ ಲಭಿಸಿದ ನಂತರ ರಾಜ್ಯಮಟ್ಟದಲ್ಲಿ ಬ್ಯಾಂಕಿಂಗ್ ಸಮಿತಿಗಳೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ಸಭೆಯಲ್ಲಿ ಜಿಲ್ಲೆಯ ಶಾಸಕರಾದ ಇ.ಚಂದ್ರಶೇಖರನ್, ಎನ್.ಎ ನೆಲ್ಲಿಕುನ್ನು, ಸಿ.ಎಚ್ ಕುಞಂಬು, ಎ.ಕೆ.ಎಂ ಅಶ್ರಫ್, ಕ್ರಷಿಕಲ್ಯಾಣ ಇಲಾಖೆ ನಿರ್ದೇಶಕ ಶ್ರೀರಾಮ್ ವೆಂಕಟ್ರಾಮನ್ ಐ.ಎ.ಎಸ್, ಕಾಸರಗೋಡು ಅಪರ ಜಿಲ್ಲಾಧಿಕಾರಿ ಪ್ರತೀಕ್ ಜೈನ್, ಕೇಂದ್ರ ತೋಟಗಾರಿಕಾ ಸಂಶೋಧನಾ ಕೇಂದ್ರದ ಪ್ಲಾಂಟ್ ಪ್ರೊಟೆಕ್ಷನ್ ಅಧಿಕಾರಿ ಡಾ. ವಿನಾಯಕ ಹೆಗ್ಡೆ, ಕೇರಳ ಕೃಷಿ ವಿಶ್ವವಿದ್ಯಾಲಯದ ಡೈರೆಕ್ಟರ್ ಆಫ್ ಎಕ್ಸ್‍ಟೆನ್ಶನ್ ಡಾ. ಜೇಕಬ್ ಜಾನ್ ಉಪಸ್ಥಿತರಿದ್ದರು.