ನವದೆಹಲಿ: ಹಲವು ಮತದಾರರ ಗುರುತಿನ ಚೀಟಿಗಳು ಒಂದೇ ಎಪಿಕ್ ಸಂಖ್ಯೆಯನ್ನು ಹೊಂದಿರುವುದರ ಬಗ್ಗೆ ಕೇಂದ್ರ ಚುನಾವಣಾ ಆಯೋಗ ನೀಡಿರುವ ವಿವರಣೆಯನ್ನು ಒಪ್ಪಲು ನಿರಾಕರಿಸಿರುವ ತೃಣಮೂಲ ಕಾಂಗ್ರೆಸ್ (ಟಿಎಂಸಿ), 'ಆಯೋಗವು ತಪ್ಪನ್ನು 24 ಗಂಟೆಗಳಲ್ಲಿ ಒಪ್ಪಿಕೊಳ್ಳಬೇಕು' ಎಂದು ಹೇಳಿದೆ.
ಮತದಾರರ ಪಟ್ಟಿಯನ್ನು 100 ದಿನಗಳಲ್ಲಿ ಸರಿಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದೆ.
ಆಯೋಗವು ತನ್ನ ತಪ್ಪನ್ನು ಒಪ್ಪಿಕೊಳ್ಳದೆ ಇದ್ದರೆ, ಆಯೋಗಕ್ಕೆ ಇನ್ನಷ್ಟು ಮುಜುಗರ ಉಂಟುಮಾಡುವ ದಾಖಲೆಗಳನ್ನು ಮಂಗಳವಾರ ಬಿಡುಗಡೆ ಮಾಡಲಾಗುವುದು ಎಂದು ಟಿಎಂಸಿ ಎಚ್ಚರಿಕೆ ನೀಡಿದೆ. ತಪ್ಪುಗಳ ಹಿಂದೆ ಇರುವ 'ಬಿಜೆಪಿಯ ಸೂತ್ರಧಾರ ಯಾರು' ಎಂಬುದನ್ನು ಪತ್ತೆ ಮಾಡಲು ತನಿಖೆ ಆಗಬೇಕು ಎಂದು ಕೂಡ ಪಕ್ಷ ಒತ್ತಾಯ ಮಾಡಿದೆ.
ಬೇರೆ ಬೇರೆ ರಾಜ್ಯಗಳಲ್ಲಿ ಮತದಾರರ ಎಪಿಕ್ ಕಾರ್ಡ್‌ಗಳಲ್ಲಿನ ಸಂಖ್ಯೆ ಒಂದೇ ರೀತಿ ಇರುವುದನ್ನು ಚುನಾವಣಾ ಆಯೋಗವು ಭಾನುವಾರ ಒಪ್ಪಿಕೊಂಡಿದೆ.
ಪಕ್ಷದ ಸಂಸದರಾದ ಸಾಗರಿಕಾ ಘೋಷ್ ಮತ್ತು ಕೀರ್ತಿ ಆಜಾದ್ ಅವರ ಜೊತೆಗೂಡಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಂಸದ ಡೆರೆಕ್ ಒ'ಬ್ರಯಾನ್, ಒಂದೇ ಎಪಿಕ್ ಸಂಖ್ಯೆ ಇರುವ ಬೇರೆ ಬೇರೆ ಮತದಾರರ ಗುರುತಿನ ಚೀಟಿಗಳನ್ನು ಪ್ರದರ್ಶಿಸಿದರು. ಒಂದೇ ಎಪಿಕ್ ಸಂಖ್ಯೆಗಳು ಇರುವ 128 ಉದಾಹರಣೆಗಳನ್ನು ಅವರು ತೋರಿಸಿದರು. ಇನ್ನೊಂದು ಉದಾಹರಣೆಯಲ್ಲಿ ಮೂರು ಮತದಾರರ ಚೀಟಿಗಳ ಎಪಿಕ್ ಸಂಖ್ಯೆ ಒಂದೇ ಆಗಿತ್ತು. ಇಷ್ಟೂ ಮತದಾರರ ಚೀಟಿಗಳು ಪಶ್ಚಿಮ ಬಂಗಾಳ ಮತ್ತು ಹರಿಯಾಣಕ್ಕೆ ಸೇರಿದವು.
ಕೆಲವು ರಾಜ್ಯಗಳಲ್ಲಿ ಚುನಾವಣೆಗೆ ಮುನ್ನ ನಿರ್ಮಾಣ ಕಾಮಗಾರಿಗಳನ್ನು ಆರಂಭಿಸಲಾಗುತ್ತಿದೆ. ಅಲ್ಲಿ ಕೆಲಸ ಮಾಡುವವರ ವೇಷದಲ್ಲಿ ಹಲವು ಮತದಾರರನ್ನು ಕರೆತರಲಾಗುತ್ತಿದೆ ಎಂದು ಒ'ಬ್ರಯಾನ್ ದೂರಿದರು.