ಗುವಾಹಟಿ: ಅರುಣಾಚಲ ಪ್ರದೇಶದ ವಿವಿಧ ಸ್ಥಳೀಯ ಆಚರಣೆ, ಧಾರ್ಮಿಕ ಮುಖಂಡರು ಶುಕ್ರವಾರ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ಭೇಟಿಯಾಗಿ ಚರ್ಚಿಸಿದರು.
ಬಲವಂತದ ಮತಾಂತರ ತಡೆಗೆ 'ಅರುಣಾಚಲ ಪ್ರದೇಶ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆ (ಎಪಿಎಫ್‌ಆರ್‌ಎ) 1978' ಜಾರಿಗೆ ಬಿಜೆಪಿ ಸರ್ಕಾರ ಮುಂದಾಗಿರುವುದರಿಂದ ಈ ಭೇಟಿ ಮಹತ್ವದ್ದಾಗಿದೆ.
ಸೂರ್ಯ, ಚಂದ್ರನ ಆರಾಧಿಸುವ ಸ್ಥಳೀಯ ನಂಬಿಕೆಗಳಿಗೆ ಪ್ರೋತ್ಸಾಹಿಸುವ ಸ್ಥಳೀಯ ಸಮೂಹಗಳು, ಕ್ರೈಸ್ತ ಧರ್ಮದ ಪ್ರಭಾವದಿಂದ ಸ್ಥಳೀಯ ಅಸ್ಮಿತೆ ಮತ್ತು ಸಂಸ್ಕೃತಿಯನ್ನು ರಕ್ಷಿಸಬೇಕು ಎಂದು ಪ್ರತಿಪಾದಿಸಿವೆ.
ಬಲವಂತದ ಮತಾಂತರ ತಡೆಗೆ 1978ರಲ್ಲಿ ಕಾಯ್ದೆ ರಚನೆಯಾಗಿದ್ದರೂ ನಿಯಮ ರೂಪಿಸಿರಲಿಲ್ಲ. ಗುವಾಹಟಿ ಹೈಕೋರ್ಟ್ ಆದೇಶದಂತೆ ರಾಜ್ಯದ ಬಿಜೆಪಿ ಸರ್ಕಾರ ಈಗ ನಿಯಮ ರೂಪಿಸಲು ಮುಂದಾಗಿದೆ.
ಸ್ಥಳೀಯ ನಿವಾಸಿ ತಂಬೊ ತಮಿನ್ ಎಂಬವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಆಧರಿಸಿ ಹೈಕೋರ್ಟ್, ಆರು ತಿಂಗಳಲ್ಲಿ ನಿಯಮ ರೂಪಿಸಬೇಕು ಎಂದು ಸರ್ಕಾರಕ್ಕೆ ಆದೇಶಿಸಿತ್ತು.
ಆದಷ್ಟು ಶೀಘ್ರ ನಿಯಮಗಳನ್ನು ರೂಪಿಸಬೇಕು. ನಾವು ಯಾವುದೇ ಧರ್ಮದ ವಿರುದ್ಧವಾಗಿ ಇಲ್ಲ. ಆದರೆ, ಬಲವಂತದ ಮತಾಂತರ ಸಲ್ಲದು ಎಂದು ಅರುಣಾಚಲದ ದೇಶೀಯ ನಂಬಿಕೆ ಮತ್ತು ಸಂಸ್ಕೃತಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮಾಯಾ ಮುರ್ಟೆಂ ಅವರು ಹೇಳಿದರು.