ಕೊಲ್ಹಾಪುರ (PTI): ಛತ್ರಪತಿ ಶಿವಾಜಿ ಮಹಾರಾಜ ಮತ್ತು ಅವರ ಪುತ್ರ ಛತ್ರಪತಿ ಸಂಭಾಜಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಪತ್ರಕರ್ತ ಪ್ರಶಾಂತ್ ಕೊರಟಕರ್ ಅವರನ್ನು ಕೊಲ್ಹಾಪುರದ ಸೆಷನ್ಸ್ ನ್ಯಾಯಾಲಯವು ಇದೇ 28ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿದೆ.
ಮಹಾರಾಷ್ಟ್ರದ ನಾಗ್ಪುರ ನಿವಾಸಿ ಕೊರಟಕರ್ ಜೊತೆಗಿನ ಸಂಭಾಷಣೆಯನ್ನು ಕೊಲ್ಹಾಪುರ ಮೂಲದ ಇತಿಹಾಸಕಾರ ಇಂದ್ರಜೀತ್ ಸಾವಂತ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು.ಆ ಆಡಿಯೊ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.
ದ್ವೇಷಭಾವನೆ ಹರಡಿದ ಆರೋಪದಡಿ ಕೊರಟಕರ್ ವಿರುದ್ಧ ಫೆ.26ರಂದು ಪ್ರಕರಣ ದಾಖಲಾಗಿತ್ತು. ಕೊರಟಕರ್ ಅವರನ್ನು ಸೋಮವಾರ ತೆಲಂಗಾಣದಲ್ಲಿ ಬಂಧಿಸಲಾಗಿದೆ.
'ನನ್ನ ಸಂಭಾಷಣೆಯನ್ನು ತಿರುಚಿಲಾಗಿದೆ ಮತ್ತು ನಾನು ಈ ಬಗ್ಗೆ ಸಾರ್ವಜನಿಕವಾಗಿ ಕ್ಷಮೆ ಯಾಚಿಸಿದ್ದೇನೆ' ಎಂದು ಕೊರಟಕರ್ ಅವರು ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಕೊರಟಕರ್ ಅರ್ಜಿಯನ್ನು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರು ಮಾ.18ರಂದು ವಜಾಗೊಳಿಸಿದ್ದರು.