ನವದೆಹಲಿ: 'ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ' ಎಂಬುದು ಈ ವರ್ಷದ ಅಂತರರಾಷ್ಟ್ರೀಯ ಯೋಗ ದಿನದ ಘೋಷವಾಕ್ಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಘೋಷಿಸಿದ್ದಾರೆ.
'ಮನ್ ಕಿ ಬಾತ್' ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 'ಅಂತರರಾಷ್ಟ್ರೀಯ ಯೋಗ ದಿನವು ಒಂದು ಭವ್ಯ ಉತ್ಸವದ ಆಕಾರವನ್ನು ಪಡೆದುಕೊಂಡಿದೆ.
ನಾವು (ಭಾರತೀಯರು) ಯೋಗದ ಮೂಲಕ ಇಡೀ ಜಗತ್ತನ್ನು ಆರೋಗ್ಯಕರವಾಗಿಸಲು ಬಯಸುತ್ತೇವೆ. ಫಿಟ್‌ನೆಸ್ ಜೊತೆಗೆ ಯೋಗ ಕೂಡ ಅಭ್ಯಾಸವಾಗುತ್ತಿದೆ' ಎಂದು ಹೇಳಿದ್ದಾರೆ.
'ಅಂತರರಾಷ್ಟ್ರೀಯ ಯೋಗ ದಿನಕ್ಕೆ ಕ್ಷಣಗಣನೆ ಆರಂಭವಾಗಿದೆ. ಇನ್ನು 100 ದಿನಗಳಿಗಿಂತ ಕಡಿಮೆ ಸಮಯ ಉಳಿದಿದ್ದು, ನೀವು ಇನ್ನೂ ನಿಮ್ಮ ಜೀವನದಲ್ಲಿ ಯೋಗವನ್ನು ಅಳವಡಿಸಿಕೊಂಡಿಲ್ಲದಿದ್ದರೆ, ಈಗಲೇ ಅಳವಡಿಸಿಕೊಳ್ಳಿ' ಎಂದು ಸಲಹೆ ನೀಡಿದ್ದಾರೆ.
ಪ್ರತಿ ಬಾರಿಯ ಯೋಗ ದಿನಾಚರಣೆಗೆ ಪೂರಕವಾಗಿ ವಿಶ್ವಸಂಸ್ಥೆ ಘೋಷವಾಕ್ಯವೊಂದನ್ನು ನೀಡುತ್ತದೆ. ಅದರಂತೆ, ಈ ಬಾರಿ 'ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ' ಎಂಬ ಥೀಮ್ ಅನ್ನು ನೀಡಲಾಗಿದೆ. ಇದು ಹತ್ತನೇ ವರ್ಷದ ಅಂತರರಾಷ್ಟ್ರೀಯ ಯೋಗ ದಿನಾಚರಣೆಯಾಗಿದೆ.
ಹಿನ್ನೆಲೆ
2014ರ ಡಿಸೆಂಬರ್ 11ರಂದು ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ 'ವಿಶ್ವ ಯೋಗ ದಿನಾಚರಣೆ' ಮಾಡುವ ಕುರಿತ ಕರಡು ಪ್ರಸ್ತಾವನೆಗೆ ಅನುಮೋದನೆ ದೊರೆಯಿತು. ಅದಕ್ಕೂ ಮೊದಲು, ಪ್ರಧಾನಿ ನರೇಂದ್ರ ಮೋದಿ, ಯೋಗಕ್ಕೆ ಒಂದು ದಿನ ಸೀಮಿತವಾಗಿರಿಸಬೇಕು ಮತ್ತು ಜಾಗತಿಕವಾಗಿ ಆಚರಿಸಲು ಅನುವು ಮಾಡಿಕೊಡುವಂತೆ ಪ್ರಸ್ತಾವನೆ ಸಲ್ಲಿಸಿದ್ದರು. ಅದರಂತೆ, ವಿಶ್ವಸಂಸ್ಥೆ ಅಂತರರಾಷ್ಟ್ರೀಯ ಯೋಗ ದಿನಾಚರಣೆಗೆ ಅನುಮೋದನೆ ನೀಡಿತು. ಇದು ಭಾರತೀಯರಿಗೆ ಹೆಮ್ಮೆಯ ಕ್ಷಣವೆಂದು ಬಣ್ಣಿಸಲಾಗಿದೆ.
ಆಚರಣೆ
2015ರ ಜೂನ್ 21ರಂದು ಜಾಗತಿಕವಾಗಿ ಮೊದಲ, ವಿಶ್ವ ಯೋಗ ದಿನ ಆಚರಿಸಲಾಯಿತು. ಕೇಂದ್ರ ಸರ್ಕಾರ, ಆಯುಷ್ ಸಚಿವಾಲಯದ ನೇತೃತ್ವದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮುಂದಾಳತ್ವದಲ್ಲಿ ರಾಜಪಥದಲ್ಲಿ ವಿಶ್ವ ಯೋಗ ದಿನಾಚರಣೆ ನಡೆಯಿತು.
ಮಹತ್ವ
ಜೂನ್ 21 ಅನ್ನು ಸುದೀರ್ಘ ದಿನವೆಂದು ಪರಿಗಣಿಸಲಾಗುತ್ತದೆ. ಸೂರ್ಯೋದಯವು ಬೇಗನೆ ಉಂಟಾಗಿ, ಸೂರ್ಯಾಸ್ತವು ತಡವಾಗಿ ಆಗಲಿದೆ. ಹೀಗಾಗಿ ಹೆಚ್ಚಿನ ಅವಧಿ ಹಗಲು ಇದ್ದು, ಅದಕ್ಕಾಗಿಯೇ ಈ ದಿನವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಮತ್ತು ಆಹಾರ ಪದ್ಧತಿ, ಜೀವನಶೈಲಿಯಿಂದ ಬರಬಹುದಾದ ವಿವಿಧ ಕಾಯಿಲೆಗಳಿಂದ ಮುಕ್ತಿ ಪಡೆಯುವುದು, ಮಾನಸಿಕ ಆರೋಗ್ಯ ವೃದ್ಧಿಸಿಕೊಳ್ಳುವುದು ಕೂಡ ಯೋಗದ ಮಹತ್ವಗಳಲ್ಲಿ ಒಂದು. ಮಕ್ಕಳಿಂದ ತೊಡಗಿ, ಹಿರಿಯರವರೆಗೆ, ಯೋಗದಲ್ಲಿ ವಿವಿಧ ಆಸನಗಳಿವೆ.
ಮನೆಯಲ್ಲಿ, ಕೆಲಸದ ಸ್ಥಳದಲ್ಲಿ ಮತ್ತು ಪ್ರವಾಸದ ಸಂದರ್ಭದಲ್ಲಿ ಸರಳವಾಗಿ ಕೆಲವೊಂದು ಯೋಗ ಭಂಗಿಗಳನ್ನು ಮಾಡುವುದರಿಂದ, ಆರೋಗ್ಯ ಸುಸ್ಥಿರವಾಗಿರುತ್ತದೆ ಎಂದು ತಜ್ಞರು ಹೇಳುತ್ತಾರೆ.
ಯೋಗವನ್ನು ನಿಯಮಿತವಾಗಿ ಮಾಡುವುದರಿಂದ, ರಕ್ತಪರಿಚಲನೆ, ಜೀರ್ಣಕ್ರಿಯೆ ಸರಾಗವಾಗಿ ಉಂಟಾಗಿ, ದೈಹಿಕ ಸ್ಥಿತಿಗತಿ ಉತ್ತಮವಾಗಿರುತ್ತದೆ. ಅಲ್ಲದೆ, ಒತ್ತಡದ ಜೀವನಶೈಲಿಯಿಂದ ಪಾರಾಗಿ, ಮಾನಸಿಕ ನೆಮ್ಮದಿ ಪಡೆಯಲು, ಉತ್ತಮ ನಿದ್ರೆಗಾಗಿ ಯೋಗವು ಸಹಕರಿಸುತ್ತದೆ.