ಭಾಗಲ್ಪುರ: ಬಿಹಾರದ ಹಳ್ಳಿಯೊಂದರಲ್ಲಿ ನಲ್ಲಿ ನೀರಿನ ವಿಚಾರಕ್ಕೆ ಕೇಂದ್ರ ಸಚಿವರ ಸಂಬಂಧಿಕರೂ ಆದ ಅಣ್ಣ-ತಮ್ಮನ ನಡುವಿನ ವಾಗ್ವಾದ ಗುಂಡಿನ ಕಾಳಗಕ್ಕೆ ತಿರುಗಿ, ಒಬ್ಬನ ಸಾವಿನಲ್ಲಿ ಪರ್ಯಾವಸನಗೊಂಡಿದೆ. ಘಟನೆಯಲ್ಲಿ ಮೃತನ ತಾಯಿ ಮತ್ತು ಸೋದರನೂ ಗಂಭೀರವಾಗಿ ಗಾಯಗೊಂಡಿದ್ದಾರೆ.
ಭಾಗಲ್ಪುರ ಪಕ್ಕದ ನೌಗಾಚಿಯಾ ಪೊಲೀಸ್ ಜಿಲ್ಲೆಯ ಜಗತ್ಪುರ್ ಗ್ರಾಮದಲ್ಲಿ ಸಹೋದರರಾದ ವಿಶ್ವಜಿತ್ ಮತ್ತು ಜೈಜಿತ್ ಯಾದವ್ ನಡುವೆ ಗುಂಡಿನ ಚಕಮಕಿ ನಡೆಯಿತು.
ನಲ್ಲಿ ನೀರಿನ ವಿಚಾರವಾಗಿ ಸಹೋದರರ ನಡುವೆ ಮೊದಲು ಮಾತಿನ ಚಕಮಕಿ ನಡೆದಿದೆ. ಜಗಳ ಬಿಡಿಸಲು ತಾಯಿ ಮಧ್ಯ ಪ್ರವೇಶಿಸಲು ಯತ್ನಿಸಿದ್ದಾರೆ. ಇಬ್ಬರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ವಿಶ್ವಜಿತ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಗೊಂಡಿರುವ ಜೈಜಿತ್ ಮತ್ತು ಆತನ ತಾಯಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ' ಎಂದು ನೌಗಾಚಿಯಾ ಎಸ್ಪಿ ಪ್ರೇರಣಾ ಕುಮಾರ್ ತಿಳಿಸಿದ್ದಾರೆ.
ಈ ಕುಟುಂಬವು ಬಿಜೆಪಿಯ ಹಿರಿಯ ನಾಯಕ ಮತ್ತು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರಾಯ್ ಅವರಿಗೆ ಹತ್ತಿರದ ಸಂಬಂಧಿಕರು ಎಂದು ಗ್ರಾಮಸ್ಥರು ಹೇಳಿದ್ದಾರೆ.