ಚುರಾಚಾಂದ್‌ಪುರ : ಜನಾಂಗೀಯ ಸಂಘರ್ಷದಿಂದ ನಲುಗಿರುವ ಮಣಿಪುರದ ಜನರು ಶಾಂತಿ ಮತ್ತು ಸೌಹಾರ್ದತೆ ಪುನಃ ಸ್ಥಾಪಿಸಲು ಒಟ್ಟಾಗಿ ಕೆಲಸ ಮಾಡುವಂತೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರು ಮನವಿ ಮಾಡಿದ್ದಾರೆ.
ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳ ನಿಯೋಗವು ಶನಿವಾರ ಮಣಿಪುರದ ಚುರಾಚಾಂದ್‌ಪುರ ಜಿಲ್ಲೆಯ ಪುನರ್ವಸತಿ ಕೇಂದ್ರಕ್ಕೆ ಭೇಟಿ ನೀಡಿ, ಅಲ್ಲಿ ಆಶ್ರಯ ಪಡೆದಿರುವವರ ಜತೆ ಮಾತನಾಡಿತು.
ಗವಾಯಿ ನೇತೃತ್ವದ ನಿಯೋಗದಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಎಂ.ಎಂ.ಸುಂದರೇಶ್ ಮತ್ತು ಕೆ.ವಿ. ವೆಂಕಟೇಶ್ ಅವರು ಇದ್ದರು.
ಜಿಲ್ಲೆಯ ಲಮ್ಕಾದಲ್ಲಿರುವ ಮಿನಿ ಸೆಕ್ರೆಟರಿಯೇಟ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಕಾನೂನು ಸೇವಾ ಶಿಬಿರ ಮತ್ತು ವೈದ್ಯಕೀಯ ಶಿಬಿರವನ್ನು ವರ್ಚುವಲ್ ಆಗಿ ಉದ್ಘಾಟಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಣಿಪುರ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ. ಕೃಷ್ಣಕುಮಾರ್ ಮತ್ತು ನ್ಯಾಯಮೂರ್ತಿ ಗೋಲ್ಮೆ ಗೈಫುಲ್‌ಶಿಪು ಉಪಸ್ಥಿತರಿದ್ದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ನ್ಯಾಯಮೂರ್ತಿ ಗವಾಯಿ, 'ಭಾರತದ ಸಂವಿಧಾನವು ದೇಶದ ಎಲ್ಲಾ ನಾಗರಿಕರಿಗೆ ಸಮಾನ ಹಕ್ಕುಗಳನ್ನು ಖಾತರಿಪಡಿಸುತ್ತದೆ' ಎಂದು ಹೇಳಿದರು.
ತಾವು ಕಾರ್ಯನಿರ್ವಾಹಕ ಅಧ್ಯಕ್ಷರಾಗಿರುವ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರವು, (ಎನ್‌ಎಎಲ್‌ಎಸ್‌ಎ) ಮಣಿಪುರ ಗಲಭೆಯಿಂದಾಗಿ ನಿರ್ವಸಿತರಾದವರಿಗೆ ಪರಿಹಾರ ಸಾಮಗ್ರಿಗಳನ್ನು ಒದಗಿಸಲು ₹2.5 ಕೋಟಿ ಮಂಜೂರು ಮಾಡಿದೆ. ಎನ್‌ಎಎಲ್‌ಎಸ್‌ಎ, ಈ ಹಿಂದೆ ₹1.5 ಕೋಟಿ ನೀಡಿತ್ತು ಎಂದು ತಿಳಿಸಿದರು.
ಅಗತ್ಯ ಆರೋಗ್ಯ ಸೇವೆಗಳನ್ನು ಒದಗಿಸಲು ರಾಜ್ಯದಾದ್ಯಂತ 109 ವೈದ್ಯಕೀಯ ಶಿಬಿರಗಳನ್ನು ಸ್ಥಾಪಿಸಲಾಗಿದೆ ಎಂದು ಮಾಹಿತಿ ನೀಡಿದರು.
ಜನಾಂಗೀಯ ಹಿಂಸಾಚಾರದ ಕಾರಣ ಶಿಕ್ಷಣ ವಂಚಿತರಾಗಿರುವ ವಿದ್ಯಾರ್ಥಿಗಳನ್ನು ಮತ್ತೆ ಶಾಲೆಗೆ ಸೇರಿಸಬೇಕು ಎಂದ ಅವರು, ಎಲ್ಲಾ ವಿದ್ಯಾರ್ಥಿಗಳು ತಮ್ಮ ಶಿಕ್ಷಣ ಪೂರ್ಣಗೊಳಿಸುವುದನ್ನು ಖಚಿತಪಡಿಸಿಕೊಳ್ಳುವಂತೆ ಶಿಕ್ಷಣ ಸಂಸ್ಥೆಗಳು ಮತ್ತು ಸಾರ್ವಜನಿಕರಿಗೆ ಕರೆ ನೀಡಿದರು.