ಮಾಸ್ಕೊ: ಅಮೆರಿಕ ಅಧಿಕಾರಿಗಳ ಸಮ್ಮುಖದಲ್ಲಿ ರಷ್ಯಾ ಹಾಗೂ ಉಕ್ರೇನ್ ನಡುವಣ ಶಾಂತಿ ಮಾತುಕತೆಗೆ ಆತಿಥ್ಯ ವಹಿಸಲು ಸಿದ್ಧ ಎಂದು ಬೆಲಾರಸ್ ಅಧ್ಯಕ್ಷ ಅಲೆಕ್ಸಾಂಡರ್ ಲುಕಶೆಂಕೊ ಹೇಳಿದ್ದಾರೆ.
ಅಮೆರಿಕದ ಬ್ಲಾಗರ್ ಮರಿಯೊ ನೌಫಲ್ ಅವರಿಗೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದ್ದಾಗಿ ಸರ್ಕಾರಿ ಸುದ್ದಿ ಸಂಸ್ಥೆ 'ಬೆಲ್ಟಾ' ವರದಿ ಮಾಡಿದೆ.
'ರಷ್ಯಾ ಅಧ್ಯಕ್ಷ ವ್ಲಾಡಿಮರ್ ಪುಟಿನ್ ಹಾಗೂ ಉಕ್ರೇನ್ ಅಧ್ಯಕ್ಷ ವೊಲೊಡಿಮರ್ ಝೆಲೆನ್‌ಸ್ಕಿ ಅವರೊಂದಿಗೆ ನಾನು ಇಲ್ಲಿ ಅವರ (ಅಮೆರಿಕ ಅಧಿಕಾರಿಗಳ) ನಿರೀಕ್ಷೆಯಲ್ಲಿದ್ದೇನೆ ಎಂದು ಅವರಿಗೆ ಹೇಳಿ' ಎಂದು ಲುಕಶೆಂಕೊ ಹೇಳಿದ್ದಾರೆ.
ಪುಟಿನ್ ಆಪ್ತರಾಗಿರುವ ಲುಕಶೆಂಕೊ, ರಷ್ಯಾಗೆ ಬೆಂಬಲ ನೀಡಿದ್ದಕ್ಕಾಗಿ ಅಮೆರಿಕ ಹಾಗೂ ಐರೋಪ್ಯ ಒಕ್ಕೂಟದಿಂದ ನಿರ್ಬಂಧಕ್ಕೆ ಒಳಗಾಗಿದ್ದಾರೆ. 2022ರಲ್ಲಿ ಉಕ್ರೇನ್‌ಗೆ ಹೆಚ್ಚಿನ ಪ್ರಮಾಣದ ಸೇನೆಯನ್ನು ಬೆಲಾರಸ್ ಮೂಲಕ ನುಗ್ಗಿಸಿತ್ತು.
'ನೀವು ಒಪ್ಪಂದ ಮಾಡಿಕೊಳ್ಳಲು ಬಯಸಿದರೆ, ನಾವು ಶಾಂತವಾಗಿ ಕುಳಿತು ಒಪ್ಪಂದ ಮಾಡಿಕೊಳ್ಳಲಿದ್ದೇವೆ. ಬೆಲಾರಸ್ ಗಡಿಯಿಂದ ಉಕ್ರೇನ್ ರಾಜಧಾನಿಗೆ 200 ಕಿ.ಮೀ. ದೂರವಿದೆ ಅಷ್ಟೇ. ವಿಮಾನದಲ್ಲಿ ಅರ್ಧ ಗಂಟೆ ಪ್ರಯಾಣ. ಬನ್ನಿ' ಎಂದು ಲುಕಶೆಂಕೊ ಆಹ್ವಾನ ನೀಡಿದ್ದಾರೆ.
ರಷ್ಯಾದೊಂದಿಗೆ ಮಾತುಕತೆ ನಡೆಸಿ ಮೂರು ವರ್ಷಗಳಿಂದ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಟ್ರಂಪ್ ಮಾಡುತ್ತಿರುವ ಪ್ರಯತ್ನಗಳನ್ನು ಲುಕಶೆಂಕೊ ಶ್ಲಾಘಿದ್ದಾರೆ. 'ಟ್ರಂಪ್ ಒಳ್ಳೆಯ ವ್ಯಕ್ತಿ. ಅವರು ಅದರ ಬಗ್ಗೆ ಸಾಕಷ್ಟು ಮಾತನಾಡುತ್ತಾರೆ. ಉಕ್ರೇನ್, ಮಧ್ಯಪ್ರಾಚ್ಯದಲ್ಲಿನ ಯುದ್ಧವನ್ನು ಕೊನೆಗೊಳಿಸಲು ಅವರು ಪ್ರಯತ್ನಗಳನ್ನು ಮಾಡಿದ್ದಾರೆ' ಎಂದು ಲುಕಶೆಂಕೊ ಹೇಳಿದ್ದಾರೆ.