ಇಸ್ಲಾಮಾಬಾದ್: ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ಭದ್ರತಾ ಸಿಬ್ಬಂದಿಯನ್ನು ಕರೆದೊಯ್ಯುತ್ತಿದ್ದ ಬಸ್ ಮೇಲೆ ನಡೆದ ಬಾಂಬ್ ದಾಳಿಯಲ್ಲಿ ಕನಿಷ್ಠ ಐವರು ಯೋಧರು ಹುತಾತ್ಮರಾಗಿದ್ದಾರೆ. ಹತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ನೌಷ್ಕಿ ಜಿಲ್ಲೆಯಲ್ಲಿ ಈ ದಾಳಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮತ್ತಷ್ಟು ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.
ಇದೇ ಪ್ರಾಂತ್ಯದಲ್ಲಿ ಜಾಫರ್ ಎಕ್ಸ್‌ಪ್ರೆಸ್ ಹೆಸರಿನ ರೈಲಿನ ಮೇಲೆ 'ಬಲೋಚ್ ಲಿಬರೇಷನ್ ಆರ್ಮಿ' (ಬಿಎಲ್‌ಎ) ಮಂಗಳವಾರ (ಮಾರ್ಚ್ 11) ದಾಳಿ ನಡೆಸಿತ್ತು. ಕ್ವೆಟ್ಟಾದಿಂದ ಪೆಶಾವರದತ್ತ ಚಲಿಸುತ್ತಿದ್ದ ಆ ರೈಲಿನಲ್ಲಿ ಸುಮಾರು 450 ಪ್ರಯಾಣಿಕರು ಇದ್ದರು.
ಗುಡ್ಡಗಾಡು ಪ್ರದೇಶದಲ್ಲಿ ಹೋಗುತ್ತಿದ್ದ ರೈಲಿನ ಪಕ್ಕದಲ್ಲೇ ಭಾರಿ ಸ್ಫೋಟ ನಡೆಸಲಾಗಿತ್ತು. ಇದರಿಂದ, ರೈಲು ಹಳಿ ತಪ್ಪಿತ್ತು. ಕೂಡಲೇ, ರೈಲಿಗೆ ನುಗ್ಗಿದ್ದ ಉಗ್ರರು ಪ್ರಯಾಣಿಕರನ್ನು ಒತ್ತೆ ಇರಿಸಿಕೊಂಡಿದ್ದರು.
ತಕ್ಷಣವೇ ಪ್ರಯಾಣಿಕರ ರಕ್ಷಣೆಗೆ ಧಾವಿಸಿದ್ದ ಭದ್ರತಾ ಪಡೆಗಳು ಬುಧವಾರ ತಡರಾತ್ರಿವರೆಗೆ ಕಾರ್ಯಾಚರಣೆ ನಡೆಸಿದ್ದವು. ಪಾಕ್ ಸೇನೆಯ ಮಾಹಿತಿ ಪ್ರಕಾರ, ಕಾರ್ಯಾಚರಣೆ ವೇಳೆ 33 ಉಗ್ರರು ಹತ್ಯೆಯಾಗಿದ್ದಾರೆ. 354 ಒತ್ತೆಯಾಳುಗಳನ್ನು ರಕ್ಷಿಸಲಾಗಿದ್ದು, 31 ಯೋಧರು ಹುತಾತ್ಮರಾಗಿದ್ದಾರೆ.