ಭುವನೇಶ್ವರ: ವಿದೇಶಿ ಮಹಿಳೆಯೊಬ್ಬರು ತಮ್ಮ ತೊಡೆಯ ಮೇಲೆ ಜಗನ್ನಾಥ ದೇವರ ಹಚ್ಚೆ ಹಾಕಿಸಿಕೊಂಡಿದ್ದು, ಒಡಿಶಾದಲ್ಲಿ ವಿವಾದಕ್ಕೆ ಕಾರಣವಾಗಿದೆ. ಮಹಿಳೆ ವಿರುದ್ಧ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಟ್ಯಾಟೂ ಹಾಕಿಸಿಕೊಂಡಿರುವ ಮಹಿಳೆಯ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಮಹಿಳೆ ವಿರುದ್ಧ ಜಗನ್ನಾಥ ದೇವರ ಭಕ್ತರು ಪ್ರತಿಭಟನೆ ಆರಂಭಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಶಹೀದ್ ನಗರ ಠಾಣೆಯಲ್ಲಿ ಭಾನುವಾರ ಕೆಲವರು ಮಹಿಳೆ ವಿರುದ್ಧ ದೂರು ದಾಖಲಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 299 (ಧಾರ್ಮಿಕ ಭಾವನೆಗೆ ಧಕ್ಕೆ ತರುವ ಯತ್ನ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದರು.
ವಿವಾದದ ಬೆನ್ನಲ್ಲೇ ವಿದೇಶಿ ಮಹಿಳೆ ಮತ್ತು ಹಚ್ಚೆ ಹಾಕಿದ ಪಾರ್ಲರ್‌ನ ಮಾಲೀಕರು ಜಾಲತಾಣದಲ್ಲಿ ವಿಡಿಯೊ ಮೂಲಕ ಕ್ಷಮೆಯಾಚಿಸಿದ್ದಾರೆ.
ಕೈಮುಗಿದು ಕ್ಷಮೆಯಾಚಿಸಿರುವ ವಿದೇಶಿ ಮಹಿಳೆ, 'ಜಗನ್ನಾಥ ದೇವರಿಗೆ ಅಗೌರವ ತೋರುವುದು ನನ್ನ ಉದ್ದೇಶವಾಗಿರಲಿಲ್ಲ. ನಾನೂ ಜಗನ್ನಾಥನ ಭಕ್ತೆ. ಪ್ರತಿದಿನವೂ ದೇಗುಲಕ್ಕೆ ಹೋಗುತ್ತೇನೆ. ನನ್ನಿಂದ ತಪ್ಪಾಗಿದೆ, ಕ್ಷಮಿಸಿ. ಶೀಘ್ರವೇ ಇದನ್ನು ಅಳಿಸಿಹಾಕುತ್ತೇನೆ' ಎಂದು ಹೇಳಿದ್ದಾರೆ.
ಪಾರ್ಲರ್ ಮಾಲೀಕರು, 'ತೊಡೆಯ ಬದಲಾಗಿ ಕೈ ಮೇಲೆ ಜಗನ್ನಾಥ ದೇವರ ಹಚ್ಚೆ ಹಾಕಿಸಿಕೊಳ್ಳುವಂತೆ ಸಿಬ್ಬಂದಿ ಸಲಹೆ ನೀಡಿದ್ದರು. ಆದರೆ ವಿದೇಶಿ ಮಹಿಳೆ ಅದನ್ನು ಕೇಳದೆ ತೊಡೆ ಮೇಲೆಯೇ ಟ್ಯಾಟೂ ಹಾಕಿಸಿಕೊಂಡರು. ಈ ಸಂದರ್ಭದಲ್ಲಿ ನಾನು ಪಾರ್ಲರ್‌ನಲ್ಲಿ ಇರಲಿಲ್ಲ. ಈ ತಪ್ಪಿಗೆ ಕ್ಷಮೆಯಾಚಿಸುತ್ತೇನೆ' ಎಂದು ಹೇಳಿದ್ದಾರೆ.