ಇಸ್ತಾಂಬುಲ್: ಇಸ್ತಾಂಬುಲ್ ಮೇಯರ್ ಎಕ್ರೆಂ ಇಮಾಮೊಗ್ಲು ಅವರ ಬಂಧನ ಖಂಡಿಸಿ ಟರ್ಕಿಯಾದ್ಯಂತ ಪ್ರತಿಭಟನೆಗಳು ನಡೆಯುತ್ತಿದ್ದು, ಈ ಬಗ್ಗೆ ವರದಿ ಮಾಡಿದ ಹಲವು ಪತ್ರಕರ್ತರನ್ನು ಬಂಧಿಸಲಾಗಿದೆ ಎಂದು ಪತ್ರಕರ್ತರ ಸಂಘಟನೆಯೊದು ಹೇಳಿದೆ. ಬಂಧಿತರ ಪೈಕಿ 7 ಮಂದಿಗೆ ಮಂಗಳವಾರ ಜಾಮೀನು ದೊರೆತಿದೆ.
'ಕನಿಷ್ಠ 8 ಮಂದಿ ವರದಿಗಾರರು ಹಾಗೂ ಛಾಯಾಗ್ರಾಹಕರನ್ನು (ಫೋಟೊಜರ್ನಲಿಸ್ಟ್) ಅಧಿಕಾರಿಗಳು ಸೋಮವಾರ ಬಂಧಿಸಿದ್ದಾರೆ. ಈ ಮೂಲಕ, ಟರ್ಕಿ ಸರ್ಕಾರವು ಪತ್ರಿಕಾ ಸ್ವಾತಂತ್ರ್ಯವನ್ನು ಹಾಗೂ ಸತ್ಯವನ್ನು ತಿಳಿಯುವ ಜನರ ಹಕ್ಕನ್ನು ಕಸಿದಿದೆ' ಎಂದು 'ಡಿಸ್ಕ್-ಬಸಿನ್-ಇಸ್ ಮೀಡಿಯಾ ವರ್ಕರ್ಸ್ ಆರೋಪಿಸಿದೆ. ಬಂಧಿತರನ್ನು ತಕ್ಷಣವೇ ಬಿಡುಗಡೆಗೊಳಿಸಬೇಕೆಂದೂ ಆಗ್ರಹಿಸಿದೆ.
ಟರ್ಕಿಯ ಮಾಧ್ಯಮ ಸಂಸ್ಥೆಗಳು, ಪತ್ರಕರ್ತರು ಹಾಗೂ ರಾಜಕಾರಣಿಗಳಿಗೆ ಸೇರಿದ 700ಕ್ಕೂ ಅಧಿಕ ಖಾತೆಗಳನ್ನು ಸ್ಥಗಿತಗೊಳಿಸುವಂತೆ ನ್ಯಾಯಾಲಯಗಳು ಆದೇಶಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾಗಿ ಸಾಮಾಜಿಕ ಮಾಧ್ಯಮ 'ಎಕ್ಸ್' ತಿಳಿಸಿದೆ.
ಮೇಯರ್ ಅವರ ಬಂಧನ ಖಂಡಿಸಿ ಪ್ರತಿಭಟನೆಗಳು ಆರಂಭಗೊಂಡ ನಂತರ, 1,133ಕ್ಕೂ ಅಧಿಕ ಜನರನ್ನು ಬಂಧಿಸಲಾಗಿದೆ. 123ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದು, ಆಯಸಿಡ್, ಬಾಂಬ್‌ಗಳು ಹಾಗೂ ಚಾಕುಗಳನ್ನು ಜಪ್ತಿ ಮಾಡಲಾಗಿದೆ ಎಂದು ಸಚಿವ ಅಲಿ ಯೆರ್ಲಿಕಯ ತಿಳಿಸಿದ್ದಾರೆ.
ಜೈಲಿನಲ್ಲಿ ಭೇಟಿ: 'ರಿಪಬ್ಲಿಕನ್ ಪೀಪಲ್ಸ್ ಪಾರ್ಟಿ'ಯ ಮುಖ್ಯಸ್ಥ ಓಝ್‌ಗುರ್ ಓಝೆಲ್ ಅವರು, ಸದ್ಯ ಜೈಲಿನಲ್ಲಿರುವ ಇಮಾಮೊಗ್ಲು ಅವರನ್ನು ಮಂಗಳವಾರ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.
ಟರ್ಕಿಯ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಅವರ ಬದ್ಧ ರಾಜಕೀಯ ವೈರಿ ಎಂದೂ ಗುರುತಿಸಿಕೊಂಡಿರುವ ಮೇಯರ್ ಎಕ್ರೆಂ ಇಮಾಮೊಗ್ಲು ಅವರನ್ನು ಮಾರ್ಚ್ 19ರಂದು ಬಂಧಿಸಲಾಗಿತ್ತು.