ನವದೆಹಲಿ: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ 'ಅಮೆರಿಕ ಮೊದಲು' ನೀತಿಯನ್ನು 'ಅಮೆರಿಕ ಮಾತ್ರ' ಎಂಬುದಾಗಿ ತಪ್ಪಾಗಿ ಅರ್ಥೈಸಿಕೊಳ್ಳಬಾರದು ಎಂದು ಅಮೆರಿಕದ ರಾಷ್ಟ್ರೀಯ ಗುಪ್ತಚರ ಸಂಸ್ಥೆಯ ನಿರ್ದೇಶಕಿ ತುಳಸಿ ಗಬಾರ್ಡ್ ಮಂಗಳವಾರ ಹೇಳಿದ್ದಾರೆ.
ರೈಸಿನಾ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತ-ಅಮೆರಿಕ ಸಂಬಂಧವನ್ನು ಇನ್ನಷ್ಟು ಕ್ಷೇತ್ರಗಳಿಗೆ ವಿಸ್ತರಿಸಲು 'ಬಹುದೊಡ್ಡ ಅವಕಾಶ ಇದೆ' ಎಂದು ಅಭಿಪ್ರಾಯಪಟ್ಟರು.
ಪ್ರಧಾನಿ ನರೇಂದ್ರ ಮೋದಿ ಮತ್ತು ಟ್ರಂಪ್ ಅವರು ಕಳೆದ ತಿಂಗಳು ವಾಷಿಂಗ್ಟನ್ ಡಿಸಿಯಲ್ಲಿ ನಡೆಸಿದ ಮಾತುಕತೆ ವೇಳೆ ಉಭಯ ದೇಶಗಳ ನಡುವಣ ಒಟ್ಟಾರೆ ದ್ವಿಪಕ್ಷೀಯ ಸಂಬಂಧವನ್ನು ಹೆಚ್ಚಿಸುವ ಕುರಿತು ಚರ್ಚಿಸಿದ್ದಾರೆ ಎಂದರು.
ಟ್ರಂಪ್ ಅವರ 'ಅಮೆರಿಕ ಮೊದಲು' ನೀತಿಯಂತೆಯೇ, ಪ್ರಧಾನಿ ಮೋದಿ ಕೂಡ 'ಭಾರತ ಮೊದಲು' ಎಂಬ ನೀತಿಗೆ ಬದ್ಧರಾಗಿದ್ದಾರೆ ಎಂದು ಹೇಳಿದರು.
'ಎರಡೂ ದೇಶಗಳ ನಡುವಿನ ಈ ಪಾಲುದಾರಿಕೆ ಮತ್ತು ಸ್ನೇಹ ಸದಾ ಮುಂದುವರಿಯುತ್ತದೆ' ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ವಾಷಿಂಗ್ಟನ್‌ನಲ್ಲಿ ನಡೆದ ಮೋದಿ-ಟ್ರಂಪ್ ಭೇಟಿಯನ್ನು 'ಇಬ್ಬರು ಹಳೆಯ ಸ್ನೇಹಿತರ ಪುನರ್‌ಮಿಲನ' ಎಂದು ಬಣ್ಣಿಸಿದರು.