ಲಖನೌ: ವಿದೇಶಿ ಆಕ್ರಮಣಕಾರರನ್ನು ವೈಭವೀಕರಿಸುವುದು ದೇಶದ್ರೋಹವೇ ಸರಿ. ನವ ಭಾರತದಲ್ಲಿ ಇಂತಹ ವಿಶ್ವಾಸಘಾತಕ ಕೃತ್ಯಗಳಿಗೆ ಅವಕಾಶವಿಲ್ಲ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಗುರುವಾರ ಹೇಳಿದ್ದಾರೆ.
ಬಹ್ರೈಚ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿರುವ ಯೋಗಿ, ಈ ದೇಶದ ಶ್ರೇಷ್ಠ ನಾಯಕರಿಗೆ ಪ್ರತಿಯೊಬ್ಬ ನಾಗರಿಕನೂ ಗೌರವ ತೋರಬೇಕು.
ವಿದೇಶಿ ಆಕ್ರಮಣಕಾರರನ್ನು ವೈಭವೀಕರಿಸಬಾರದು ಎಂದಿದ್ದಾರೆ.
'ವಿದೇಶಿ ದಾಳಿಕೋರರನ್ನು ವೈಭವೀಕರಿಸುವುದು, ರಾಷ್ಟ್ರದ್ರೋಹದ ನೆಲೆಯನ್ನು ಬಲಪಡಿಸುವುದಕ್ಕೆ ಸಮ. ಎಂತಹದೇ ಸನ್ನಿವೇಶದಲ್ಲಿಯೂ ಇಂತಹ ನಾಡದ್ರೋಹದ ಕೃತ್ಯಗಳನ್ನು ನವ ಭಾರತ ಒಪ್ಪುವುದಿಲ್ಲ' ಎಂದು ಪ್ರತಿಪಾದಿಸಿದ್ದಾರೆ.
ದೇಶದ ಸನಾತನ ಸಂಸ್ಕೃತಿಯನ್ನು ನಾಶ ಮಾಡಲು ಯತ್ನಸಿದ ವಿದೇಶಿ ದಾಳಿಕೋರರು, ನಮ್ಮ ಹೆಣ್ಣುಮಕ್ಕಳ ಮೇಲೆ ದೈಹಿಕ ದೌರ್ಜನ್ಯವೆಸಗಿದ್ದಾರೆ. ನಮ್ಮ ನಂಬಿಕೆಯ ಮೇಲೆ ದಾಳಿ ಮಾಡಿದ್ದಾರೆ ಎಂದು ಗುಡುಗಿದ್ದಾರೆ.
ವಿಶ್ವವು ಇಂದು ಭಾರತದ ಪರಂಪರೆಯನ್ನು ಗುರುತಿಸುತ್ತಿದೆ ಎಂದಿರುವ ಉತ್ತರ ಪ್ರದೇಶ ಸಿಎಂ, 'ತನ್ನ ಪರಂಪರೆಯನ್ನು ಮರೆತು ಯಾವುದೇ ರಾಷ್ಟ್ರ ಪ್ರಗತಿ ಸಾಧಿಸಲು ಸಾಧ್ಯವಿಲ್ಲ' ಎಂದು ಒತ್ತಿಹೇಳಿದ್ದಾರೆ.
ಮೊಘಲ್ ದೊರೆ ಔರಂಗಜೇಬನ ಸಮಾಧಿ ವಿಚಾರವಾಗಿ ಮಹಾರಾಷ್ಟ್ರದ ನಾಗ್ಪುರದಲ್ಲಿ ಪರಿಸ್ಥಿತಿ ಗಂಭೀರವಾಗಿರುವ ಹೊತ್ತಿನಲ್ಲೇ ಯೋಗಿ ಹೇಳಿಕೆ ನೀಡಿದ್ದಾರೆ.