ನವದೆಹಲಿ: ಬಾಲಕಿ ಮೇಲಿನ ಅತ್ಯಾಚಾರದ ಆರೋಪ ಹೊತ್ತಿರುವ ತನ್ನ ಕಕ್ಷಿದಾರನ ಜಾಮೀನು ಅರ್ಜಿಯಲ್ಲಿ 'ಒಪ್ಪಿತ ಸಂಬಂಧ' ಎಂದು ವಾದ ಮಂಡಿಸಿದ್ದಕ್ಕಾಗಿ ವಕೀಲರನ್ನು ಸುಪ್ರೀಂ ಕೋರ್ಟ್ ಗುರುವಾರ ತರಾಟೆಗೆ ತೆಗೆದುಕೊಂಡಿದೆ.
ನಿಮ್ಮ ಅರ್ಜಿಯನ್ನು ಓದಿದ ನಂತರ ನಾವು ಮಾನಸಿಕವಾಗಿ ಕುಸಿದುಹೋಗಿದ್ದೇವೆ.
ಕನಿಷ್ಠ 20 ಬಾರಿ 'ಒಪ್ಪಿತ ಸಂಬಂಧ' ಎಂದು ಬರೆದಿದ್ದೀರಿ. ಹುಡುಗಿಯ ವಯಸ್ಸು ಎಷ್ಟು? ಅವಳು ಅಪ್ರಾಪ್ತಳು ಎಂದು ನೀವೇ ಅರ್ಜಿಯಲ್ಲಿ ಉಲ್ಲೇಖಿಸಿದ್ದೀರಿ. ಹಾಗಿದ್ದರೆ, ಒಪ್ಪಿತ ಸಂಬಂಧ ಸಾಧ್ಯವೇ ಎಂದು ನ್ಯಾಯಮೂರ್ತಿ ಸೂರ್ಯ ಕಾಂತ್ ಚಾಟಿ ಬೀಸಿದ್ದಾರೆ.
ಸಂತ್ರಸ್ತೆ ಅಪ್ರಾಪ್ತಳಾಗಿದ್ದರೆ ಒಪ್ಪಿತ ಸಂಬಂಧ ಎಂಬುದು ಅಪ್ರಸ್ತುತ ಎಂಬುದನ್ನು ನ್ಯಾಯಾಲಯ ವಕೀಲರಿಗೆ ಒತ್ತಿ ಹೇಳಿದೆ.
'ಒಪ್ಪಿತ ಸಂಬಂಧ ಎಂದು ಪ್ರತಿ ಪ್ಯಾರಾದಲ್ಲೂ ಬರೆದಿದ್ದೀರಿ. ಹಾಗಿದ್ದರೆ, ಒಮ್ಮತದ ಸಂಬಂಧದ ಅರ್ಥವೇನು? ಕಾನೂನಿನ ಎಬಿಸಿಡಿ ತಿಳಿದಿಲ್ಲ ನಿಮಗೆ. ನೀವು ಒಪ್ಪಿತ ಸಂಬಂಧ ಎಂದು ಏಕೆ ಅರ್ಜಿ ಸಲ್ಲಿಸಿದ್ದೀರಿ'ಎಂದು ನ್ಯಾಯಮೂರ್ತಿ ಎನ್.ಕೋಟೀಶ್ವರ್ ಸಿಂಗ್ ಅವರೊಂದಿಗೆ ವಿಭಾಗೀಯಪೀಠದಲ್ಲಿದ್ದ ನ್ಯಾಯಮೂರ್ತಿ ಸೂರ್ಯ ಕಾಂತ್ ತರಾಟೆಗೆ ತೆಗೆದುಕೊಂಡಿದ್ದಾರೆ.
'ನೀವು AoR (ಅಧಿಕೃತ ವಕೀಲ) ಆಗಿದ್ದೀರಾ?'ಎಂದು ಪೀಠ ಪ್ರಶ್ನಿಸಿದೆ.
ಇಂಥವರೆಲ್ಲ AoRಗೆ ಹೇಗೆ ಅರ್ಹರಾಗುತ್ತಿದ್ದಾರೆ? ನಿಮಗೆ ಮೂಲ ಕಾನೂನೇ ತಿಳಿದಿಲ್ಲ. 20 ಬಾರಿ ನೀವು ಒಮ್ಮತದ ಸಂಬಂಧ ಎಂದು ಹೇಳಿದ್ದೀರಿ. ನಾಳೆ ನೀವು 8 ತಿಂಗಳ ಮಗುವಿನೊಂದಿಗೆ ಒಮ್ಮತದ ಸಂಬಂಧವಿತ್ತು ಎಂದೂ ಹೇಳುತ್ತೀರಿ ಎಂದು ನ್ಯಾಯಪೀಠ ಕಿಡಿಕಾರಿದೆ.
ಬಳಿಕ, ಪೀಠಕ್ಕೆ ವಕೀಲರು ಕ್ಷಮೆಯಾಚಿಸಿದ್ದಾರೆ. ನಂತರ, ಜಾಮೀನು ಅರ್ಜಿಯ ಕುರಿತು ಪೊಲೀಸರು ಮತ್ತು ಇತರರಿಗೆ ಪೀಠ ನೋಟಿಸ್ ನೀಡಿದೆ.