ಕಾಸರಗೋಡು: ಶ್ರೀಮದನಂತೇಶ್ವರ ಸಿದ್ದಿವಿನಾಯಕ ದೇವಸ್ಥಾನದ ಪುನ:ಪ್ರತಿಷ್ಠಾ ಬ್ರಹ್ಮಕಲಶೋತ್ಸವ, ಮೂಡಪ್ಪ ಸೇವೆಗೆ ತಸುಗಳು ಬಾಕಿ ಉಳಿದಿರುವಂತೆ ಸೀಮೆಯ ವಿವಿಧೆಡೆಗಳಿಂದ ಆಗಮಿಸಿದ ಸ್ವಯಂಸೇವಕರ ತಂಡ ಶ್ರಮದಾನದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತಿದೆ. ವಿಶ್ವ ಹಿಂದೂ ಪರಿಷತ್ ಸೇರಿದಂತೆ ವಿವಿಧ ಸಂಘಟನೆಗಳ ಸಾವಿರಕ್ಕೂ ಮಿಕ್ಕಿ ಕಾರ್ಯಕರ್ತರು ಭಾನುವಾರ ದೇವಸ್ಥಾನದ ಒಳಾಂಗಣ ಹಾಗೂ ಹೊರಭಾಗದಲ್ಲಿ ಶ್ರಮದಾನದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.
ಆಬಾಲ ವೃದ್ಧರಾದಿಯಾಗಿ ನಾನಾ ಕೆಲಸಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಸೀಮೆ ದೇಗುಲದ ಬ್ರಹ್ಮಕಲಶೋತ್ಸವ-ಮೂಡಪ್ಪ ಸೇವೆಯ ಯಶಸ್ಸಿಗಾಗಿ ತಮ್ಮ ಯೋದನ ಸಮರ್ಪಿಸಿದರು. ಕಾಸರಗೋಡು ಗುಡ್ಡೆ ದೇವಸ್ಥಾನ ಸನಿಹದ ನಿವಾಸಿ, ಹಿರಿಯ ಚೇತನ ಪುಷ್ಪಾ ಅವರು ತಮ್ಮ ವಯಸ್ಸನ್ನೂ ಲೆಕ್ಕಿಸದೆ ಶ್ರಮದಾಳದಲ್ಲಿ ಪಾಲ್ಗೊಳ್ಳುವ ಮೂಲಕ ಗಮನ ಸೆಳೆದರು.
ಬ್ರಹ್ಮ ಕಲೋತ್ಸವ ಸಂದರ್ಭ ಖಾದ್ಯ ಬಡಿಸಲು ಕಾಸರಗೋಡು ಕೂಡ್ಲು ನಿವಾಸಿ ಸುಬ್ರಹ್ಮಣ್ಯ ಆಚಾರ್ಯ, ಅಚ್ಯುತ ಆಚಾರ್ಯ, ಯೋಗೇಂದ್ರ ಆಚಾರ್ಯ, ಮಾಧವ ಆಚಾರ್ಯ ಅವರ ನೇತೃತ್ವದಲ್ಲಿ ಪಾರಂಪರಿಕ ಗೆರಟೆ ಸೌಟು ತಯಾರಿ ಕರ್ಯವೂ ಭರದಿಂದ ಸಾಗುತ್ತಿದೆ. ದೇವಾಲಯದೊಳಗಿನ ವಿವಿಧ ಗುಡಿಗಳ ಶುಚೀಕರಣ, ಪೇಂಟಿಂಗ್ ಕೆಲಸ, ಹೊರಾಂಗಣದಲ್ಲಿ ಚಪ್ಪರದೊಳಗಿನ ಕಲ್ಲುಮಣ್ಣು ಸ್ಥಳಾಂತರ ಹೀಗೇ ಬಿಡುವಿಲ್ಲದೆ, ನಾನಾ ಕೆಲಸಕಾರ್ಯಗಳಲ್ಲಿ ಕಾರ್ಯಕರ್ತರು ತೊಡಗಿಸಿಕೊಂಡರು.
ಮಾಣಿಲಶ್ರೀಗಳ ಭೇಟಿ:
ಮಾಣಿಲಶ್ರೀಧಾಮದ ಶ್ರೀ ಮೋಹನದಾಸ ಸ್ವಾಮೀಜಿ ಭಾನುವರ ದೇವಸ್ಥಾನಕ್ಕೆ ಭೇಟಿ ನೀಡಿ, ಬ್ರಹ್ಮಕಲಶೋತ್ಸವ=ಮೂಡಪ್ಪ ಸೇವೆ ಹಿನ್ನೆಲೆಯಲ್ಲಿ ಬಿರುಸಿನಿಂದ ನಡೆಯುತ್ತಿರುವ ಸಿದ್ಧತಾ ಕಾರ್ಯಗಳ ಬಗ್ಗೆ ಅವಲೋಕನ ನಡೆಸಿ, ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡಿದರು.
ಉತ್ಸವದ ಮೆರಗು ಹೆಚ್ಚಿಸುವ ನಿಟ್ಟಿನಲ್ಲಿ ದೇವಸ್ಥಾನಕ್ಕೆ ಭಕ್ತಾದಿಯೊಬ್ಬರು ಬೇತಾಳವನ್ನು ಉದಾರವಾಗಿ ನೀಡಿದ್ದಾರೆ.
ಮಧೂರು ಕ್ಷೇತ್ರದ ಶ್ರಮದಾನದಲ್ಲಿ ಪಾಲ್ಗೊಂಡ ಕಾರ್ಯಕರ್ತರು.
: ಶ್ರಮದಾನದಲ್ಲಿ ಪಾಲ್ಗೊಂಡಿದ್ದ ಹಿರಿಯ ಚೇತನ ಪುಷ್ಪಾ