ನವದೆಹಲಿ: ಕೇಂದ್ರವು ಕಳೆದ ಆರು ವರ್ಷಗಳಿಂದಲೂ ಲೋಕಸಭಾ ಉಪಸ್ಪೀಕರ್ ಹುದ್ದೆಗೆ ನೇಮಕಾತಿಯನ್ನು ಮಾಡಿಲ್ಲ. ಸಂವಿಧಾನ ತಜ್ಞರು ಮತ್ತು ವಿರೋಧ ಪಕ್ಷಗಳ ಪ್ರಕಾರ ಇದು ಸಂಸದೀಯ ವ್ಯವಸ್ಥೆಯಲ್ಲಿ ಉಪಸ್ಪೀಕರ್‌ಗೆ ಮಹತ್ವದ ಸ್ಥಾನವನ್ನು ಖಾತರಿಪಡಿಸಿರುವ ಸಂವಿಧಾನವನ್ನು ಉಲ್ಲಂಘಿಸುತ್ತದೆ ಎಂದು newindianexpress.com ವರದಿ ಮಾಡಿದೆ.
ಸರಕಾರವು 17ನೇ ಲೋಕಸಭೆಯಲ್ಲಿ ಉಪಸ್ಪೀಕರ್ ನೇಮಕವನ್ನು ಮಾಡಿರಲಿಲ್ಲ. ಜೂನ್‌ನಲ್ಲಿ ಒಂದು ವರ್ಷವನ್ನು ಪೂರೈಸಲಿರುವ 18ನೇ ಲೋಕಸಭೆಯಲ್ಲಿಯೂ ಖಾಲಿಯಿರುವ ಈ ಸ್ಥಾನವನ್ನು ಭರ್ತಿ ಮಾಡುವ ಉದ್ದೇಶ ಸರಕಾರಕ್ಕೆ ಇಲ್ಲ ಎಂದು ಪ್ರತಿಪಕ್ಷ ಸದಸ್ಯರು ಬೆಟ್ಟು ಮಾಡಿದ್ದಾರೆ.
ಪ್ರತಿಪಕ್ಷ ಸದಸ್ಯರು ಸ್ಪೀಕರ್ ಜೊತೆಗಿನ ಸಭೆಗಳಲ್ಲಿ ಉಪಸ್ಪೀಕರ್ ವಿಷಯವನ್ನು ಪ್ರಸ್ತಾಪಿಸಿದ್ದರು, ಆದರೆ ಈ ಹುದ್ದೆಯನ್ನು ಭರ್ತಿ ಮಾಡುವ ನಿಟ್ಟಿನಲ್ಲಿ ಯಾವುದೇ ಪ್ರಗತಿಯಾಗಿಲ್ಲ ಎಂದು ಹಿರಿಯ ಕಾಂಗ್ರೆಸ್ ಸಂಸದರೋರ್ವರು ಹೇಳಿದರು.
ಉಪಸ್ಪೀಕರ್ ಹುದ್ದೆಗೆ ನೇಮಕಾತಿ ಪ್ರಕ್ರಿಯೆಗೆ ಸರಕಾರವು ಚಾಲನೆ ನೀಡಬೇಕು ಎಂದು ಸ್ಪೀಕರ್ ಹೇಳುತ್ತಾರೆ. ಸರಕಾರವು ಪ್ರತಿಪಕ್ಷಕ್ಕೆ ಈ ಹುದ್ದೆಯನ್ನು ನೀಡಲು ಬಯಸುವುದಿಲ್ಲ. ಸಂಸದೀಯ ಸಂಪ್ರದಾಯದ ಪ್ರಕಾರ ಉಪಸ್ಪೀಕರ್ ಹುದ್ದೆಯು ಪ್ರತಿಪಕ್ಷಕ್ಕೆ ದೊರೆಯಬೇಕು ಎಂದು ಅವರು ಹೇಳಿದರು.
18ನೇ ಲೋಕಸಭೆಯ ಮೊದಲ ಅಧಿವೇಶವು ಸ್ಪೀಕರ್ ಆಯ್ಕೆಗೆ ಸಂಬಂಧಿಸಿದಂತೆ ಎನ್‌ಡಿಎ ಮತ್ತು ಪ್ರತಿಪಕ್ಷಗಳ ನಡುವೆ ಅಭೂತಪೂರ್ವ ಹಣಾಹಣಿಗೆ ಸಾಕ್ಷಿಯಾಗಿತ್ತು. ಆಗ ಸ್ವತಂತ್ರ ಭಾರತದ ಇತಿಹಾಸದಲ್ಲಿ ನಾಲ್ಕನೇ ಬಾರಿಗೆ ಮತ್ತು ಕಳೆದ ಸುಮಾರು 50 ವರ್ಷಗಳಲ್ಲಿ ಮೊದಲ ಬಾರಿಗೆ ಸ್ಪೀಕರ್ ಹುದ್ದೆಗೆ ಸ್ಪರ್ಧೆ ನಡೆದಿತ್ತು. ಉಪಸ್ಪೀಕರ್ ಹುದ್ದೆಯ ವಿಷಯದಲ್ಲಿ ಸರಕಾರ ಮತ್ತು ಪ್ರತಿಪಕ್ಷ ಒಮ್ಮತವನ್ನು ಸಾಧಿಸುವಲ್ಲಿ ವಿಫಲಗೊಂಡಿದ್ದು ಸ್ಪೀಕರ್ ಹುದ್ದೆಗೆ ಚುನಾವಣೆಯನ್ನು ಅಗತ್ಯವಾಗಿಸಿತ್ತು.
ಸ್ಪೀಕರ್‌ಗಳನ್ನು ಹೆಚ್ಚಾಗಿ ಒಮ್ಮತದ ಮೂಲಕ ಆಯ್ಕೆ ಮಾಡಲಾಗಿದ್ದರೂ, ಮೋದಿ ಸರಕಾರವು ಉಪಸ್ಪೀಕರ್ ಹುದ್ದೆಯನ್ನು ತನಗೆ ನೀಡಲು ನಿರಾಕರಿಸಿದ ಬಳಿಕ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುವುದು ಅನಿವಾರ್ಯವಾಗಿತ್ತು ಎನ್ನುವುದು ಪ್ರತಿಪಕ್ಷದ ವಾದವಾಗಿದೆ.
ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಸಂವಿಧಾನ ತಜ್ಞ ಪಿಡಿಟಿ ಆಚಾರ್ಯ ಅವರು,ಉಪಸ್ಪೀಕರ್ ಆಯ್ಕೆ ಸಂವಿಧಾನದಲ್ಲಿ ಕಡ್ಡಾಯ ನಿಬಂಧನೆಯಾಗಿದೆ. ಅದನ್ನು ಮಾಡದಿದ್ದರೆ ಸಂವಿಧಾನದ ವಿಧಿ 93ರ ಉಲ್ಲಂಘನೆ ಎಂದೇ ಅರ್ಥ. ಉಪಸ್ಪೀಕರ್ ಖಾಸಗಿ ಸದಸ್ಯರ ಮಸೂದೆಯಂತಹ ಸಮಿತಿಗಳ ಮತ್ತು ಸದನದ ಬಜೆಟ್ ಸಮಿತಿಯ ಅಧ್ಯಕ್ಷತೆಯನ್ನು ಹೊಂದಿರುತ್ತಾರೆ ಎಂದು ಹೇಳಿದರು.
ನಿಯಮ 8ರ ಪ್ರಕಾರ ಸ್ಪೀಕರ್ ನಿಗದಿಗೊಳಿಸಿದ ದಿನಾಂಕದಂದು ಉಪಸ್ಪೀಕರ್ ಹುದ್ದೆಗೆ ಚುನಾವಣೆಯನ್ನು ನಡೆಸಬೇಕು ಎಂದು ತಜ್ಞರು ಬೆಟ್ಟು ಮಾಡಿದ್ದಾರೆ.
ಲೋಕಸಭೆಯ ಕಾರ್ಯವಿಧಾನ ಮತ್ತು ನಡವಳಿಕೆ ನಿಯಮಗಳ ಪ್ರಕಾರ ಸದನದಲ್ಲಿ ಸ್ಪೀಕರ್ ಹೊಂದಿರುವ ಅಧಿಕಾರವನ್ನೇ ಉಪಸ್ಪೀಕರ್ ಹೊಂದಿರುತ್ತಾರೆ. ಸಂವಿಧಾನದ ವಿಧಿ 180ರ ಪ್ರಕಾರ ಸ್ಪೀಕರ್ ಪೀಠವು ಖಾಲಿಯಿದ್ದಾಗ ಅವರ ಕರ್ತವ್ಯಗಳನ್ನು ನಿರ್ವಹಿಸುವ ಅಧಿಕಾರವನ್ನು ಉಪಸ್ಪೀಕರ್ ಹೊಂದಿರುತ್ತಾರೆ.
ಪ್ರಸ್ತುತ ಸ್ಪೀಕರ್ ಅನುಪಸ್ಥಿತಿಯಲ್ಲಿ ಅಧ್ಯಕ್ಷರ ಸಮಿತಿಯು ಸದನದ ಅಧ್ಯಕ್ಷತೆಯನ್ನು ವಹಿಸುತ್ತದೆ. ಕಳೆದ ಜುಲೈನಲ್ಲಿ ಸ್ಪೀಕರ್ 10 ಸಂಸದರ ಸಮಿತಿಯನ್ನು ನೇಮಕಗೊಳಿಸಿದ್ದರು. ಅಂದ ಹಾಗೆ,ಪ್ರಧಾನಿ ನರೇಂದ್ರ ಮೋದಿಯವರ ಮೊದಲ ಅವಧಿಯಲ್ಲಿ 16ನೇ ಲೋಕಸಭೆಯಲ್ಲಿ ಎಐಎಡಿಎಂಕೆಯ ಎಂ.ತಂಬಿದುರೈ ಅವರು ಉಪಸ್ಪೀಕರ್ ಆಗಿದ್ದರು.