ಠಾಣೆ: ಔರಂಗಜೇಬನ ಸಮಾಧಿಯನ್ನು ಸರ್ಕಾರವೇ ರಕ್ಷಿಸಬೇಕಿರುವುದು ದುರದೃಷ್ಟಕರ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಹೇಳಿದ್ದಾರೆ.
ಸಂರಕ್ಷಿತ ತಾಣವಾಗಿರುವ ಔರಂಗಜೇಬನ ಸಮಾಧಿಯನ್ನು ರಕ್ಷಿಸಲು ಸರ್ಕಾರ ಬದ್ಧವಾಗಿದೆ. ಆದರೆ, ಅವನ ಪರಂಪರೆಯನ್ನು ವೈಭವೀಕರಿಸುವ ಪ್ರಯತ್ನಗಳನ್ನು ಅನುಮತಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.
'ನೋವು ಮತ್ತು ಗುಲಾಮಗಿರಿಯ ಸಂಕೇತ'ವಾಗಿರುವ ಮೊಘಲ್ ಚಕ್ರವರ್ತಿಯ ಸಮಾಧಿಯನ್ನು ಕೆಡವಲು ಹಿಂದೂ ಸಂಘಟನೆಗಳು ಕರೆ ನೀಡಿದ ಬೆನ್ನಲ್ಲೇ ಫಡಣವೀಸ್ ಅವರ ಹೇಳಿಕೆ ಹೊರಬಿದ್ದಿದೆ.
ಔರಂಗಜೇಬನ ಸಮಾಧಿಯನ್ನು ಘೋಷಿತ ಸಂರಕ್ಷಿತ ತಾಣವಾಗಿ ರಕ್ಷಿಸಲು ಸರ್ಕಾರ ಬದ್ಧವಾಗಿದ್ದರೂ, ಅದರ ಸಂರಕ್ಷಣೆ ಗೌರವಕ್ಕಿಂತ ಐತಿಹಾಸಿಕ ದಾಖಲೆಯ ವಿಷಯವಾಗಿದೆ ಎಂದು ಅವರು ಹೇಳಿದ್ದಾರೆ.
'ಔರಂಗಜೇಬನಿಗೆ ಕಿರುಕುಳದ ಇತಿಹಾಸವಿದ್ದರೂ, ಅವನ ಸಮಾಧಿಯ ರಕ್ಷಣೆಯ ಜವಾಬ್ದಾರಿಯನ್ನು ಸರ್ಕಾರ ತೆಗೆದುಕೊಳ್ಳಬೇಕಾಗಿರುವುದು ದುರದೃಷ್ಟಕರ. ಆದರೂ, 'ಮಹಿಮ ಮಂಡನೆ' ಮೂಲಕ ಅವನ ಪರಂಪರೆಯನ್ನು ವೈಭವೀಕರಿಸಲು ಯಾವುದೇ ಪ್ರಯತ್ನ ನಡೆದರೆ ಅದು ಯಶಸ್ವಿಯಾಗುವುದಿಲ್ಲ'ಎಂದು ಠಾಣೆ ಜಿಲ್ಲೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರಿಗೆ ಮೀಸಲಾಗಿರುವ ದೇವಾಲಯವನ್ನು ಅವರ ಜನ್ಮ ಜಯಂತಿಯಂದೇ ಉದ್ಘಾಟಿಸಿ ಸಿಎಂ ಹೇಳಿದ್ದಾರೆ.
ಛತ್ರಪತಿ ಶಿವಾಜಿ ಮಹಾರಾಜರ ದೇವಾಲಯ ಮಾತ್ರ 'ಮಹಿಮ ಮಂಡನೆ'ಗೆ (ವೈಭವೀಕರಣ) ಅರ್ಹವಾಗಿದೆಯೇ ಹೊರತು ಔರಂಗಜೇಬನ ಸಮಾಧಿ ಅಲ್ಲ ಎಂದು ಅವರು ಹೇಳಿದ್ದಾರೆ.
ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಸೋಮವಾರ ವಿವಿಧ ಸರ್ಕಾರಿ ಕಚೇರಿಗಳಲ್ಲಿ ಪ್ರತಿಭಟನೆಗಳನ್ನು ನಡೆಸಿ ಖುಲ್ದಾಬಾದ್‌ನಲ್ಲಿರುವ ಔರಂಗಜೇಬನ ಸಮಾಧಿಯನ್ನು ಕೆಡಹುವಂತೆ ಜ್ಞಾಪನಾ ಪತ್ರಗಳನ್ನು ಸಲ್ಲಿಸಿತು.