ನವದೆಹಲಿ: 'ಪ್ರಧಾನಿ ನರೇಂದ್ರ ಮೋದಿ ಅವರ ಪದವಿ ವಿದ್ಯಾರ್ಹತೆಗೆ ಸಂಬಂಧಿಸಿದ ದಾಖಲೆಗಳನ್ನು ಕೋರ್ಟ್‌ಗೆ ತೋರಿಸಲು ಸಿದ್ಧ. ಆದರೆ, ಆರ್‌ಟಿಐ ಅನ್ವಯ ಅಪರಿಚಿತರಿಗೆ ಒದಗಿಸುವುದಿಲ್ಲ' ಎಂದು ದೆಹಲಿ ವಿಶ್ವವಿದ್ಯಾಲಯವು (ಡಿ.ಯು) ಗುರುವಾರ ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ.
ಪ್ರಧಾನಿಯವರ ಪದವಿ ವಿದ್ಯಾರ್ಥಿಗೆ ಸಂಬಂಧಿತ ವಿವರ ನೀಡಬೇಕು ಎಂದು ಕೇಂದ್ರ ಮಾಹಿತಿ ಆಯೋಗವು ಹಿಂದೆ (ಸಿಐಸಿ) ನೀಡಿದ್ದ ಆದೇಶವನ್ನು ಡಿಯು ಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ಇದಕ್ಕೆ ಪೂರಕವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ನ್ಯಾಯಮೂರ್ತಿ ಸಚಿನ್ ದತ್ತಾ ಅವರಿದ್ದ ಪೀಠಕ್ಕೆ ಈ ಮಾಹಿತಿ ನೀಡಿದರು.
'ಕೋರ್ಟ್‌ಗೆ ಅಗತ್ಯ ವಿವರವನ್ನು ಒದಗಿಸಲು ಡಿ.ಯುಗೆ ಯಾವುದೇ ತಕರಾರು ಇಲ್ಲ. ಆದರೆ, ಅಪರಿಚಿತರು ಈ ದಾಖಲೆಗಳನ್ನು ಪರಿಶೀಲಿಸಲು ಅವಕಾಶವಿಲ್ಲ. ಖಾಸಗೀತನದ ಹಕ್ಕು ರಕ್ಷಿಸುವ ಆಧಾರದಲ್ಲಿ ಸಿಐಸಿ ಅವರು ನೀಡಿರುವ ಆದೇಶವನ್ನು ರದ್ದುಪಡಿಸಬೇಕು' ಎಂದು ಮೆಹ್ತಾ ಅವರು ಕೋರಿದರು.
ಈ ಕುರಿತು ಆದೇಶವನ್ನು ಹೈಕೋರ್ಟ್‌ನ ನ್ಯಾಯಪೀಠವು ಕಾಯ್ದಿರಿಸಿದೆ.
'ಈಗ ಪ್ರಧಾನಿ ಆಗಿರುವ ಹಳೆಯ ವಿದ್ಯಾರ್ಥಿಯ ಪದವಿ ವಿವರ ಕೇಳಲಾಗುತ್ತಿದೆ. ವಿ.ವಿಗೆ ಇಲ್ಲಿ ಗೋಪ್ಯವಾಗಿ ಇಡುವುದು ಏನೂ ಇಲ್ಲ. ವರ್ಷವಾರು ದಾಖಲೆಗಳಿವೆ. ಕೋರ್ಟ್‌ಗೆ ತೋರಿಸಲು ತಕರಾರೂ ಇಲ್ಲ. ಇದು, 1978ನೇ ಸಾಲಿನ ಕಲಾ ನಿಕಾಯದ ಪದವಿಗೆ ಸಂಬಂಧಿಸಿದ್ದಾಗಿದೆ' ಎಂದು ವಿವರಿಸಿದರು.
ನೀರಜ್ ಎಂಬವರು ಸಲ್ಲಿಸಿದ್ದ ಅರ್ಜಿಯನ್ನು ಆಧರಿಸಿ ಸಿಐಸಿ ಡಿಸೆಂಬರ್ 21, 2016ರಂದು, '1978ರಲ್ಲಿ ಬಿ.ಎ ಪದವಿಯಲ್ಲಿ ಉತ್ತೀರ್ಣರಾಗಿರುವ ಎಲ್ಲ ವಿದ್ಯಾರ್ಥಿಗಳ ಮಾಹಿತಿ ಪರಿಶೀಲಿಸಲು ಅವಕಾಶ ಕಲ್ಪಿಸಬೇಕು' ಎಂದು ಸೂಚಿಸಿತ್ತು. ಜ. 23, 2017ರಂದು ಹೈಕೋರ್ಟ್ ಇದಕ್ಕೆ ತಡೆಯಾಜ್ಞೆ ನೀಡಿತ್ತು.