ಕಾಸರಗೋಡು: ಕಾಸರಗೋಡಿನ ಕಾಡಂಚಿನ 10ಕ್ಕೂ ಹೆಚ್ಚು ಗ್ರಾ.ಪಂ ಪ್ರದೇಶದಲ್ಲಿ ಚಿರತೆ ಕಾಟ ದಿಢೀರ್ ಹೆಚ್ಚಳವಾಗಿರುವುದು ನಾಡಿನ ಜನತೆಯನ್ನು ಆತಂಕಕ್ಕೆ ತಳ್ಳಿದೆ. ಕಾಡಿನಲ್ಲಿರಬೇಕಾದ ಚಿರತೆ ನಾಡಿಗಿಳಿದು ಜನರ ನಿದ್ದೆಗೆಡಿಸಲಾರಂಭಿಸಿದೆ. ಕಾಸರಗೋಡು ಜಿಲ್ಲೆಯ ಮಲೆನಾಡು ಪ್ರದೇಶದಲ್ಲಿ ಚಿರತೆ ಸಂಚಾರದಿಂದ ಜನತೆ ಕಂಗಾಲಾಗಿದ್ದು, ರಕ್ಷಣೆಗಾಗಿ ಅರಣ್ಯ ಇಲಾಖೆ ಮೊರೆಹೋಗಬೇಕಾಗಿ ಬಂದಿದೆ.
ಜಿಲ್ಲೆಯ ದೇಲಂಪಾಡಿ, ಕುತ್ತಿಕ್ಕೋಲ್, ಬೇಡಡ್ಕ, ಪೆರಿಯ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜನವಾಸವಿರುವ ಪ್ರದೇಶದಲ್ಲಿ ಚಿರತೆ ಸಂಚಾರ ಹೆಚ್ಚಾಗಿದೆ. ಸಾಕು ಪ್ರಾಣಿಗಳನ್ನು ದಾಲಿ ನಡೆಸಿ ಹತ್ಯೆಗೈಯುವ ಚಿರತೆ, ಮನುಷ್ಯರ ಮೇಲೆ ದಾಳಿ ನಡೆಸುವುದಕ್ಕೂ ಮೊದಲು ಇವುಗಳ ವಿರುದ್ಧ ಕಾರ್ಯಾಚರಣೆ ನಡೆಸಿ, ನಿರ್ಭಯವಾಗಿ ಜೀವನಸಾಗಿಸಲು ಅನುವುಮಾಡಿಕೊಡುವಂತೆ ಜನತೆ ಆಗ್ರಹಿಸಿದ್ದಾರೆ.
ದಕ್ಷಿಣ ಕೇರಳದಲ್ಲಿ ಕಾಡಾನೆಗಳು ನಾಡಿಗಿಳಿದು ಉಪಟಳ ನೀಡುತ್ತಿದ್ದರೆ ಅತ್ಯುತ್ತರ ಕೇರಳದ ಕಾಸರಗೋಡಿನ ಮಲೆನಾಡು ಪ್ರದೇಶದಲ್ಲಿ ಚಿರತೆಯ ಉಪಟಳ ಹೆಚ್ಚಾಗಿರುವುದು ಇಡೀ ನಾಡಿನ ನೆಮ್ಮದಿ ಕೆಡಿಸಿದೆ. ಈಗಾಗಲೇ ಹಲವಾರು ಸಾಕು ನಾಯಿಗಳು, ಬೆಕ್ಕುಗಳು ಚಿರತೆಗೆ ಆಹಾರವಾಗಿದೆ. ಕಾಸರಗೋಡು ಜಿಲ್ಲೆಯ 13ರಷ್ಟು ಪಂಚಾಯಿತಿ ಪ್ರದೇಶದಲ್ಲಿ ಚಿರತೆ ಭೀತಿ ಹೆಚ್ಚಾಗಿ ಕಾಡುತ್ತಿದೆ. ವಿಪರ್ಯಾಸವೆಂದರೆ ನಾಡಿಗಿಳಿದ ಚಿರತೆ ಸೆರೆಹಿಡಿಯಲು ಅರಣ್ಯ ಇಲಾಖೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳಿಲ್ಲ. ಕೇವಲ ಬೋನು ಇರಿಸಿ, ಇದರೊಳಗೆ ಶ್ವಾನ ಅಥವಾ ಆಡನ್ನು ಬಿಗಿದು ಚಿರತೆಯನ್ನು ಖೆಡ್ಡಾಕ್ಕೆ ಬೀಳಿಸಲಾಗುತ್ತಿದೆ. ಅರಣ್ಯ ಇಲಾಖೆ ನಡೆಸುವ ಈ ಪ್ರಯತ್ನದಲ್ಲಿ ಅಪರೂಪಕ್ಕೆ ಯಶಸ್ಸು ದೊರೆಯುತ್ತಿದೆ.
ಚಿರತೆ ಸಂಖ್ಯೆ ವೃದ್ಧಿ..?:
ವರ್ಷಗಳ ಹಿಂದೆ ಜಿಲ್ಲೆಯಲ್ಲಿ ಚಿರತೆಗಳೇ ಇಲ್ಲ ಎಂಬುದಾಗಿ ಅರಣ್ಯ ಇಲಾಖೆ ತಿಳಿಸುತ್ತಾ ಬಂದಿದ್ದು, ಅಡೂರು ಸನಿಹ ಪಾಂಡಿಯಲ್ಲಿ ಹಂದಿಗೆಂದು ಇರಿಸಿದ್ದ ಕುಣಿಕೆಗೆ ಸಿಲುಕಿ ಚಿರತೆ ಮೃತಪಟ್ಟಾಗ ಇಲಾಖೆ ಚಿರತೆಗಳಿರುವುದನ್ನು ಖಚಿತಪಡಿಸಿತ್ತು. ನಂತರದ ದಿನಗಳಲ್ಲಿ ವಿವಿಧ ಪಂಚಾಯಿತಿ ವ್ಯಾಪ್ತಿಯಲ್ಲಿ ಚಿರತೆ ಸಂಚಾರದ ವದಂತಿ ಹರಡಿದ್ದು, ಇವುಗಳ ಸಂಚಾರದ ಬಗ್ಗೆ ಅರಣ್ಯ ಇಲಾಖೆಗೆ ಸ್ಪಷ್ಟ ಕುರುಹುಗಳೂ ಲಭ್ಯವಾಗಿತ್ತು. ಉದುಮ ವಿಧಾನಸಭಾ ಕ್ಷೇತ್ರದ ದೇಲಂಪಾಡಿ, ಮುಳಿಯಾರು, ಕುತ್ತಿಕೋಲ್, ಬೇಡಗಂ, ಪೆರಿಯ ಮೊದಲಾದ ಪಂಚಾಯತ್ ಪ್ರದೇಶಗಳು ಅತೀ ಹೆಚ್ಚು ಚಿರತೆ ಉಪಟಳವನ್ನು ಎದುರಿಸುತ್ತಿದೆ. ಎರಡು ವಾರಗಳ ಹಿಂದೆ ಕೊಳತ್ತೂರಿನ ಕೃಷಿಕರ ಹಿತ್ತಿಲಿನ ಗುಹೆಯೊಂದರಲ್ಲಿ ಕಂಡುಬಂದಿದ್ದ ಚಿರತೆಯನ್ನು ಅರಣ್ಯ ಇಲಾಖೆ ನಂತರ ಬೋನು ಇರಿಸಿ ಸೆರೆ ಹಿಡಿದಿತ್ತು. ಸೆರೆಯಾದ ಚಿರತೆಯನ್ನು ಅರಣ್ಯ ಇಲಾಖೆ ಬೆಳ್ಳೂರು ಪಂಚಾಯಿತಿಯ ನೆಟ್ಟಣಿಗೆ ಸಮೀಪ ಕೇರಳ-ಕರ್ನಾಟಕ ಗಡಿಯ ಜಾಂಬ್ರಿ ಪ್ರದೇಶದ ಕಾಡಲ್ಲಿ ಬಿಟ್ಟಿರುವುದು ಆ ಪ್ರದೇಶದ ಜನತೆಯಿಂದ ವ್ಯಾಪಕ ಆಕ್ರೋಶಕ್ಕೂ ಕಾರಣವಾಗಿತ್ತು. ಇದಕ್ಕೂ ಮೊದಲು ಅಡೂರಿನ ತಲ್ಪಚ್ಚೇರಿಯ ಬಾವಿಯೊಂದರಲ್ಲಿ ಚಿರತೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಆ ನಂತರದ ದಿನಗಳಲ್ಲಿ ವಿವಿಧ ಪ್ರದೇಶಗಳಲ್ಲಿ ಚಿರತೆ ಸಂಚಾರವನ್ನು ಪ್ರತ್ಯಕ್ಷವಾಗಿ ಕಂಡವರಿದ್ದರೆ, ಇನ್ನು ಕೆಲವೆಡೆ ಅಳವಡಿಸಿರುವ ಸಿಸಿ ಕ್ಯಾಮರಾಗಳಲ್ಲೂ ಸೆರೆಯಾಗುತ್ತಿದೆ. ಇದರಿಂದ ಕಾಸರಗೋಡು ಜಿಲ್ಲೆಯಲ್ಲಿ ಚಿರತೆಗಳ ಸಂಖ್ಯೆಯಲ್ಲಿ ಹೆಚ್ಚಳವುಂಟಾಗಿರುವುದನ್ನೂ ಮನಗಾಣಬಹುದಾಗಿದೆ.
ಆಹಾರ ಅರಸಿ ಬರುತ್ತಿರುವ ಚಿರತೆ:
ನೀರಿನ ದಾಹ ತೀರಿಸಲು ಹಾಗೂ ಆಹಾರಕ್ಕಾಗಿ ಚಿರತೆಗಳು ನಾಡಿಗಿಳಿಯುತ್ತಿರುವುದು ಸಾಮಾನ್ಯವಾಗಿದೆ. ಕಾಡಿನಲ್ಲಿ ಆಹಾರ ಹಾಗೂ ನೀರು ಲಭ್ಯವಾಗದಿರುವುದರಿಂದ ಚಿರತೆಗಳು ಆಹಾರ ಅರಸಿಕೊಂಡು ನಾಡಿಗಿಳಿಯುತ್ತಿರುವುದು ಸಾಮಾನ್ಯವಾಗಿದೆ.