ಮುಂಬೈ: ಕ್ರಿಕೆಟ್ ಪಂದ್ಯವೊಂದರ ಸಂದರ್ಭದಲ್ಲಿ ಭಾರತ ವಿರೋಧಿ ಘೋಷಣೆ ಕೂಗಿದ ಎಂಬ ಆರೋಪದ ಅಡಿ 15 ವರ್ಷ ವಯಸ್ಸಿನ ಬಾಲಕ ಮತ್ತು ಆತನ ಕುಟುಂಬದ ಮೇಲೆ ಪ್ರಕರಣ ದಾಖಲಿಸಿದ ವಾರದ ನಂತರ, ಬಾಲಕನಿಗೆ ಪಂದ್ಯ ವೀಕ್ಷಣೆಯಲ್ಲಾಗಲಿ, ಆಟವಾಡುವುದರಲ್ಲಾಗಲಿ ಆಸಕ್ತಿಯೇ ಇರಲಿಲ್ಲ ಎಂದು ಕುಟುಂಬದ ಸದಸ್ಯರು ಹೇಳಿದ್ದಾರೆ.
ಈ ಬಾಲಕ ಶಿಕ್ಷಣಕ್ಕಾಗಿ ಮದರಸಾಕ್ಕೆ ಹೋಗುತ್ತಿದ್ದ ಎಂದು ಅವರು ಹೇಳಿದ್ದಾರೆ. ಮಹಾರಾಷ್ಟ್ರದ ಮಾಲವಣ್ ಪಟ್ಟಣದ ಬಾಲಕ, ಆತನ ತಂದೆ ಮತ್ತು ತಾಯಿಯ ವಿರುದ್ಧ ಫೆಬ್ರುವರಿ 23ರಂದು ದೂರು ದಾಖಲಾಗಿದೆ. ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯದ ಸಂದರ್ಭದಲ್ಲಿ ಬಾಲಕನು ಭಾರತ ವಿರೋಧಿ ಘೋಷಣೆ ಕೂಗಿದ್ದಾನೆ ಎಂದು ಆರೋಪಿಸಲಾಗಿದೆ.
ಬಾಲಕನ ತಂದೆ ಮತ್ತು ತಾಯಿಯನ್ನು ಬಂಧಿಸಲಾಗಿದೆ. ಬಾಲಕನನ್ನು ಬಾಲ ನ್ಯಾಯ ಮಂಡಳಿ ಮುಂದೆ ಹಾಜರುಪಡಿಸಲಾಗಿದೆ. ಇದಾದ ನಂತರದಲ್ಲಿ ಆತನ ಕುಟುಂಬಕ್ಕೆ ಸೇರಿದ ಅಂಗಡಿ ಮತ್ತು ಮನೆಯು ಅಕ್ರಮವಾಗಿ ನಿರ್ಮಿಸಿದ್ದು ಎಂಬ ಕಾರಣ ನೀಡಿ ಅವುಗಳನ್ನು ಅಧಿಕಾರಿಗಳು ಧ್ವಂಸಗೊಳಿಸಿದ್ದಾರೆ. ತಂದೆ-ತಾಯಿಗೆ ಈಗ ಜಾಮೀನು ದೊರೆತಿದೆ.
ಬಾಲಕನ ತಂದೆ ಗುಜರಿ ವ್ಯಾಪಾರಿ. ಅವರ ಸಹೋದರನಿಗೆ ಸೇರಿದ ಗೋದಾಮನ್ನು ಕೂಡ ಧ್ವಂಸಗೊಳಿಸಲಾಗಿದೆ. ನಿರ್ದಿಷ್ಟ ಪದಗಳನ್ನು ಬಳಸಿ, ಮಗನ ಜೊತೆ ಮಾತಿಗೆ ಇಳಿದು ಆತನನ್ನು ಸಿಲುಕಿಸಲು ಕೆಲವರು ಪಿತೂರಿ ನಡೆಸಿದ್ದಾರೆ ಎಂದು ಕುಟುಂಬ ದೂರಿದೆ.
ಪ್ರಕರಣದ ಕುರಿತಾಗಿ ತನಿಖೆ ನಡೆದಿದೆ. ಆದರೆ ಭಾರತ ವಿರೋಧಿ ಘೋಷಣೆ ಕೂಗಲಾಗಿದೆ ಎಂದು ಹೇಳುವ ಯಾವುದೇ ಆಡಿಯೊ ಅಥವಾ ವಿಡಿಯೊ ತುಣುಕು ತಮ್ಮ ಬಳಿ ಇಲ್ಲ ಎಂದು ಸಿಂಧುದುರ್ಗದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಮಗನಿಗೆ ಕ್ರಿಕೆಟ್‌ನಲ್ಲಿ ಆಸಕ್ತಿ ಇಲ್ಲ, ಆತ ಪಂದ್ಯಗಳನ್ನು ವೀಕ್ಷಿಸುವುದೂ ಇಲ್ಲ ಎಂದು ತಂದೆ ಹೇಳಿದ್ದಾರೆ. ತಮಗೆ ತೊಂದರೆ ಕೊಡುವ ಉದ್ದೇಶದಿಂದ ಎಲ್ಲವೂ ಪೂರ್ವಯೋಜಿತವಾಗಿ ನಡೆದಿದೆ ಎಂದು ಅವರು ದೂರಿದ್ದಾರೆ.