ನವದೆಹಲಿ: ಭಾರತೀಯ ಉತ್ಪನ್ನಗಳು ಜಾಗತಿಕ ಮಟ್ಟದಲ್ಲಿ ದೊರೆಯುವುದು ಮತ್ತು ತನ್ನದೇ ಆದ ಅಸ್ತಿತ್ವವನ್ನು ಕಾಪಾಡಿಕೊಳ್ಳುತ್ತಿರುವುದರಿಂದ 'ವೋಕಲ್ ಫಾರ್ ಲೋಕಲ್' ಅಭಿಯಾನವು ಫಲ ನೀಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, 'ದಶಕಗಳಿಂದ ಜಗತ್ತು ಭಾರತವನ್ನು ತನ್ನ ಬ್ಯಾಕ್ ಆಫೀಸ್‌ನಂತೆ ನೋಡುತ್ತಿತ್ತು.
ಆದರೆ, ಈಗ ನಮ್ಮ ದೇಶವು ವಿಶ್ವದ ಕಾರ್ಖಾನೆಯಾಗಿ ಹೊರಹೊಮ್ಮುತ್ತಿದೆ. ಇತ್ತೀಚಿನ ದಿನಗಳಲ್ಲಿ ಭಾರತ ಕೇವಲ ಕಾರ್ಯಪಡೆಯಾಗಿ ಮಾತ್ರವಲ್ಲದೆ, ವಿಶ್ವ ಶಕ್ತಿಯಾಗಿ ಮಾರ್ಪಟ್ಟಿದೆ' ಎಂದು ಗುಣಗಾನ ಮಾಡಿದ್ದಾರೆ.
ದೇಶದಲ್ಲಿ ಸೆಮಿಕಂಡಕ್ಟರ್‌ಗಳು ಮತ್ತು ವಿಮಾನ ವಾಹಕ ನೌಕೆಗಳನ್ನು ತಯಾರಿಸುತ್ತಿದೆ. ಹಾಗೆಯೇ ಸೂಪರ್‌ಫುಡ್‌ಗಳಾದ ಮಖಾನಾ (ಕಮಲದ ಬೀಜ) ಮತ್ತು ರಾಗಿ, ಆಯುಷ್ ಉತ್ಪನ್ನಗಳು ಮತ್ತು ಯೋಗವನ್ನು ವಿಶ್ವದಾದ್ಯಂತ ಅಳವಡಿಸಿಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಭಾರತವು ಪ್ರಮುಖ ಆಟೊಮೊಬೈಲ್ ಉತ್ಪಾದಕ ರಾಷ್ಟ್ರವಾಗಿ ಮಾರ್ಪಟ್ಟಿದೆ ಮತ್ತು ಅದರ ರಫ್ತು ಕೂಡಾ ಹೆಚ್ಚುತ್ತಿದೆ. ಭಾರತವು ಈಗ 'ಎಐ ಶೃಂಗಸಭೆ', 'ಜಿ-20 ಶೃಂಗಸಭೆ'ಯಂತಹ ಅನೇಕ ಜಾಗತಿಕ ಕಾರ್ಯಕ್ರಮಗಳಿಗೆ ಆತಿಥ್ಯ ವಹಿಸುತ್ತಿದೆ. ಪ್ರಯಾಗರಾಜ್‌ನಲ್ಲಿ ನಡೆದ 'ಮಹಾ ಕುಂಭಮೇಳ'ವು ಭಾರತದ ಸಂಘಟನಾ ಕೌಶಲ್ಯ ಮತ್ತು ನಾವೀನ್ಯತೆಯನ್ನು ಎತ್ತಿ ತೋರಿಸುತ್ತದೆ ಎಂದು ಹೇಳಿದ್ದಾರೆ.