ಪಟ್ನಾ: ಬಾಲಿವುಡ್ ಗಾಯಕ ಯೋ ಯೋ ಹನಿ ಸಿಂಗ್ ಅವರ 'ಮೇನಿಯೇಕ್' ಹಾಡು ಅಶ್ಲೀಲತೆಯಿಂದ ಕೂಡಿದ್ದು, ಅವರ ವಿರುದ್ಧ ಕ್ರಮ ತೆಗದುಕೊಳ್ಳುವಂತೆ ಒತ್ತಾಯಿಸಿ ಬಹುಭಾಷಾ ನಟಿ ನಿತು ಚಂದ್ರ ಅವರು ಪಟ್ನಾ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ನಿತು ಚಂದ್ರ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯು ತಿಂಗಳಾಂತ್ಯಕ್ಕೆ ನಡೆಯುವ ಸಾಧ್ಯತೆ ಇದೆ.
ಹನಿ ಸಿಂಗ್, ಗೀತರಚನೆಕಾರ ಲಿಯೋ ಗ್ರೆವಾಲ್ ಮತ್ತು ಭೋಜ್‌ಪುರಿ ಗಾಯಕರಾದ ರಾಗಿಣಿ ವಿಶ್ವಕರ್ಮ, ಅರ್ಜುನ್ ಅಜಾನಬಿ ಸೇರಿದಂತೆ ಹಾಡಿನಲ್ಲಿ ಅವರೊಂದಿಗೆ ಸಹಕರಿಸಿದವರ ವಿರುದ್ಧ ಕ್ರಮ ಜರುಗಿಸುವಂತೆ ಅರ್ಜಿಯಲ್ಲಿ ಮನವಿ ಮಾಡಲಾಗಿದೆ.
ವಿವಾದಕ್ಕೀಡಾಗಿರುವ ಹನಿ ಸಿಂಗ್ ಅವರ ಹಾಡಿನ ಸಾಹಿತ್ಯವನ್ನು ಪುನರ್‌ರಚಿಸುವಂತೆ ನಿರ್ದೇಶನ ನೀಡಬೇಕೆಂದು ನಿತು ಚಂದ್ರ ಅವರು ಕೋರ್ಟ್‌ಗೆ ಕೋರಿದ್ದಾರೆ.
ಮಹಿಳೆಯರನ್ನು ಕೇವಲ ಲೈಂಗಿಕ ವಸ್ತುಗಳಂತೆ ತೋರಿಸುವ ಉದ್ದೇಶದಿಂದ ಹಾಡನ್ನು ಚಿತ್ರೀಕರಿಸಲಾಗಿದೆ. ಈ ಹಾಡು ಮಹಿಳಾ ಸಬಲೀಕರಣಕ್ಕೆ ಮಾರಕವಾಗಿದೆ ಎಂದು ನಿತು ಚಂದ್ರ ಆರೋಪಿಸಿದ್ದಾರೆ.