ಕಾಸರಗೋಡು: ರಣಜಿ ಕ್ರಿಕೆಟ್ ಚರಿತ್ರೆಯಲ್ಲಿ ಇದೇ ಮೊದಲ ಬಾರಿಗೆ ಫೈನಲ್‍ಗೇರಿದ ಕೇರಳದ ತಂಡವನ್ನು ಪ್ರತಿನಿಧಿಸಿರುವ ಗಡಿನಾಡು ಕಾಸರಗೋಡಿನ ಪ್ರತಿಭೆ ಮೊಹಮ್ಮದ್ ಅಜರುದ್ದೀನ್ ಅವರನ್ನು ಕಾಸರಗೋಡಿನಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು. ಹುಟ್ಟೂರು ಕಾಸರಗೋಡಿನ ತಳಂಗರೆಗೆ ಆಗಮಿಸಿದ ಮಹಮ್ಮದ್ ಅಜರುದ್ದೀನ್ ಅವರನ್ನು ತಾಯ್ನೆಲದ ಬೆಂಬಲಿಗ ಅಭಿಮಾನಿಗಳು ಹೂವಿನಹಾರಹಾಕಿ, ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಸಾಗಿಸಿದರು. ಕಾಸರಗೋಡು ನಗರಸಭಾಧ್ಯಕ್ಷ ಅಬ್ಬಾಸ್ ಬೀಗಂ ನೇತೃತ್ವದಲ್ಲಿ ಅಜರುದ್ದೀನ್ ಅವರಿಗೆ ಸ್ವಾಗತ ಸಮಾರಂಭ ಆಯೋಜಿಸಲಾಗಿತ್ತು.
ಈ ಸಂದರ್ಭ ಮಹಮ್ಮದ್ ಅಜರುದ್ದೀನ್ ಪತ್ರಕರ್ತರ ಜತೆ ಮಾತನಾಡಿ, ಕೇರಳ ಕ್ರಿಕೆಟ್ ತಂಡ ದೇಶದ ಯಾವುದೇ ರಾಜ್ಯದ ತಂಡಗಳ ಜತೆಗೆ ಸ್ಪರ್ಧಿಸಿ, ಪೈಪೆÇೀಟಿ ನೀಡಿ ಗೆಲ್ಲುವ ಮಟ್ಟಕ್ಕೆ ತಲುಪಿದೆ. ಕೇರಳ ತಂಡವನ್ನು ಭಾರತೀಯ ಕ್ರಿಕೆಟ್ ನಲ್ಲಿ ಯಾರಿಗೂ ನಿರ್ಲಕ್ಷಿಸಲು ಸಾಧ್ಯವಿಲ್ಲ. ಮುಂಬರುವ ಐಪಿಎಲ್ ತಂಡಕ್ಕೆ ಅರ್ಹರಾದ ಅನೇಕರು ಕೇರಳ ತಂಡದಲ್ಲಿದ್ದಾರೆ. ರಣಜಿ ಫೈನಲ್ ನಲ್ಲಿ ಸೋತಿರಬಹುದು, ಆದರೆ ಇತಿಹಾಸದಲ್ಲೇ ಮೊದಲ ಬಾರಿಗೆ ಕೇರಳ ತಂಡ ಯಾವುದೇ ಪಂದ್ಯದಲ್ಲಿ ಸೋಲದೇ, ಫೈನಲಿಗೇರುವ ಮೂಲಕ ಸಾಧನೆ ತೋರಿದೆ. ಮುಂದೆ ಫೈನಲ್ ಗೆದ್ದು, ಭಾರತೀಯ ಕ್ರಿಕೆಟಿನಲ್ಲಿ ಕೇರಳವೂ ನಿರ್ಣಾಯಕವಾಗಲಿದೆ ಎಂದು ತಿಳಿಸಿದರು.
ಜೂನಿಯರ್ ಅಜರುದ್ದೀನ್...
ಕಾಸರಗೋಡಿನ ಜೂನಿಯರ್ ತಂಡದ ಕ್ರಿಕೆಟ್ ಪ್ರತಿಭೆಯಾಗಿ ಬೆಳೆದ ಮೊಹ್ಮದ್ ಅಜರುದ್ದೀನ್ ಕುಟುಂಬ ಕ್ರಿಕೆಟನ್ನು ನೆಚ್ಚಿಕೊಂಡಿದೆ. 1995ರಲ್ಲಿ ಭಾರತೀಯ ಕ್ರಿಕೆಟ್ ತಂಡದ ನಾಯಕ ಮೊಹಮ್ಮದ್ ಅಜರುದ್ದೀನ್ ಅವರ ಮೇಲಿನ ಪ್ರೀತಿಯಿಂದ ಅವರದೇ ಹೆಸರನ್ನು ಇರಿಸಲಾಗಿದ್ದು, ಕಾಸರಗೋಡಿನ ಜೂನಿಯರ್ ಮಹಮ್ಮದ್ ಅಜರುದ್ದೀನ್ ಆಗಿ ಕರೆಸಿಕೊಂಡಿದ್ದಾರೆ. ಅಜರುದ್ದೀನ್ ಅವರ ಅದೇ ಹಾದಿಯಲ್ಲಿ ಕ್ಲಾಸಿಕ್ ಬ್ಯಾಟರ್ ಸಹಿತ ವಿಕೆಟ್ ಕೀಪರ್ ಆಗಿ ಕೇರಳವನ್ನು ಪ್ರಥಮ ಬಾರಿಗೆ ಫೈನಲಿಗೇರಿಸುವಲ್ಲಿ ಅಜರುದ್ದೀನ್ ಮಹತ್ವದ ಪಾತ್ರ ವಹಿಸಿದ್ದರು.

