ಕುಂಬಳೆ. ರಾಷ್ಟ್ರೀಯ ಹೆದ್ದಾರಿ ನವೀಕರಣ ಕಾರ್ಯದ ಭಾಗವಾಗಿ ಸರ್ವಿಸ್ ರಸ್ತೆಯ ಉದ್ದಕ್ಕೂ ನಿರ್ಮಿಸಲಾಗುತ್ತಿರುವ ಪಾದಚಾರಿ ಮಾರ್ಗಗಳು ಅಪಾಯಕಾರಿಯಾಗುವ ಆತಂಕವಿದೆ.
ತಲಪ್ಪಾಡಿಯಿಂದ ಕಾಸರಗೋಡಿನವರೆಗೆ ನೂರಾರು ಸ್ಥಳಗಳಲ್ಲಿ ಪಾದಚಾರಿ ಮಾರ್ಗದ ಮಧ್ಯದಲ್ಲಿ ವಿದ್ಯುತ್ ಕಂಬಗಳು ವಿಲೇವಾರಿಗೊಳ್ಳದೆ ಹಾಗೆಯೇ ಬಾಕಿ ಉಳಿದುಇಕೊಂಡು ಆತಂಕಮೂಡಿಸಿದೆ. ಇದನ್ನು ಬದಲಾಯಿಸಲಾಗುವುದೆಂದು ಹೇಳಲಾಗಿದ್ದರೂ ಈವರೆಗೂ ಬದಲಾಯಿಸಿಲ್ಲ.
ಪಾದಚಾರಿ ಮಾರ್ಗಕ್ಕೆ ಪ್ರಸ್ತುತ ಇಂಟರ್ ಲಾಕ್ ಹಾಕಲಾಗಿದ್ದು, ಇನ್ನು ವಿದ್ಯುತ್ ಕಂಬ ಸ್ಥಳಾಂತರಿಸಬೇಕಾದರೆ ಮತ್ತೆ ಇಂಟರ್ ಲಾಕ್ ಒಡೆಯಬೇಕಾಗಲಿದೆ. ಪಾದಚಾರಿ ಮಾರ್ಗ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು ಪಾದಚಾರಿಗಳಿಗೆ ಅಪಾಯ ತರುವ ರೀತಿಯಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ. ಬಸ್ ಹತ್ತಲು ಆತುರದಿಂದ ಓಡುವಾಗ ಕಂಬಗಳು ಬಡಿದು ಅವಘಡಗಳಾಗುವ ಸಾಧ್ಯತೆ ಹೆಚ್ಚಿದೆ. ಅಸುರಕ್ಷಿತ ಮತ್ತು ಅವೈಜ್ಞಾನಿಕ ಕಾಮಗಾರಿಗಳಿಗೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.
ಕನಿಷ್ಠ ಬಸ್ ನಿಲ್ದಾಣ ಪರಿಸರದಲ್ಲಾದರೂ ಪಾದಚಾರಿ ಮಾರ್ಗದಲ್ಲಿರುವ ವಿದ್ಯುತ್ ಕಂಬಗಳನ್ನು ಬದಲಾಯಿಸುವ ಮೂಲಕ ಕೆಲಸ ಪೂರ್ಣಗೊಳಿಸಬೇಕು ಎಂಬುದು ಜನರ ಅಭಿಪ್ರಾಯ. ಇದೇ ವೇಳೆ, ಪಾದಚಾರಿ ಮಾರ್ಗದ ನಿರ್ಮಾಣವು ಅನೇಕ ಸ್ಥಳಗಳಲ್ಲಿ ವಿಳಂಬಗೊಳ್ಳುತ್ತಿದೆ.