ಹತ್ತಿ ಉತ್ಪಾದನೆ ಗಮನಾರ್ಹವಾಗಿ ಇಳಿಕೆಯಾಗುತ್ತಿರುವುದರಿಂದ ಭಾರತವು ಹತ್ತಿಯನ್ನು ಆಮದು ಮಾಡಿಕೊಳ್ಳುವ ಪ್ರಮಾಣವೂ ಹೆಚ್ಚುತ್ತಿದೆ.
ಒಂದೇ ವರ್ಷದಲ್ಲಿ ಅದರ ಪ್ರಮಾಣ ದ್ವಿಗುಣವಾಗಿದೆ ಎಂದು ಕಾಟನ್ ಅಸೋಶಿಯೆಷನ್ ಆಫ್ ಇಂಡಿಯಾ (ಸಿಎಐ) ತಿಳಿಸಿದೆ.
ಹತ್ತಿ ಮಾರುಕಟ್ಟೆಯ ವಾರ್ಷಿಕ ಅವಧಿ ಅಕ್ಟೋಬರ್‌ನಿಂದ ಸೆಪ್ಟೆಂಬರ್‌ವರೆಗೆ ಇರುತ್ತದೆ. ಸದ್ಯ ಕಳೆದ ಅಕ್ಟೋಬರ್‌ನಿಂದ ಇಲ್ಲಿಯವರೆಗೆ (2024-25) 2.2 ಮಿಲಿಯನ್ ಕಾಟನ್ ಬೇಲ್ಸ್ (ಹತ್ತಿ ಅಂಡಿಗೆಗಳು) ಆಮದಾಗಿದೆ. ಸೆಪ್ಟೆಂಬರ್ ವೇಳೆಗೆ ಇದರ ಪ್ರಮಾಣ 3 ಮಿಲಿಯನ್‌ಗೆ ತಲುಪಲಿದೆ ಎಂದು ತಿಳಿಸಿದೆ. 3 ಮಿಲಿಯನ್ ಕಾಟನ್ ಬೇಲ್ಸ್ 51 ಲಕ್ಷ ಕ್ವಿಂಟಾಲ್ ಹತ್ತಿಗೆ ಸಮ.
ಅಂದರೆ ಒಂದೇ ವರ್ಷದಲ್ಲಿ ಭಾರತ ಹತ್ತಿಯನ್ನು ಆಮದು ಮಾಡಿಕೊಳ್ಳುತ್ತಿರುವ ಪ್ರಮಾಣ ದ್ವಿಗುಣವಾಗಿದೆ. 2023-24 ರ ಅವಧಿಯಲ್ಲಿ ಭಾರತ 1.52 ಮಿಲಿಯನ್ ಕಾಟನ್ ಬೇಲ್ಸ್‌ಗಳನ್ನು ಆಮದು ಮಾಡಿಕೊಂಡಿತ್ತು ಎಂದು ಸಿಎಐ ತಿಳಿಸಿದೆ.
ಚೀನಾ ನಂತರ ಭಾರತವು ಹತ್ತಿಯನ್ನು ಅತಿ ಹೆಚ್ಚಾಗಿ ಆಮದು ಮಾಡಿಕೊಳ್ಳುತ್ತಿರುವ ರಾಷ್ಟ್ರವೂ ಆಗಿದೆ.
ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಹತ್ತಿಯ ಉತ್ಪಾದನೆ ಗಮನಾರ್ಹವಾಗಿ ಕುಸಿಯುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶೇ 10 ರಷ್ಟು ಹತ್ತಿ ಉತ್ಪಾದನೆ ಕಡಿಮೆಯಾಗಿದೆ. ಕಳೆದ ವರ್ಷ 29.53 ಮಿಲಿಯನ್ ಬೇಲ್ಸ್ ಹತ್ತಿ ಭಾರತದಲ್ಲಿ ಉತ್ಪಾದನೆಯಾಗಿತ್ತು. ಈ ವರ್ಷ ಬೇಡಿಕೆ 31.5 ಮಿಲಿಯನ್ ಬೇಲ್ಸ್ ಇದೆ. ಹೀಗಾಗಿ ಕೊರತೆಯನ್ನು ನೀಗಿಸಲು ಹೆಚ್ಚಿನ ಆಮದು ಮಾಡಿಕೊಳ್ಳಲಾಗುತ್ತಿದೆ ಎಂದು ಸಿಎಐ ತಿಳಿಸಿದೆ.
ಭಾರತದಲ್ಲಿ ಹತ್ತಿಯ ಬೆಳೆ ಪ್ರದೇಶದ ಎಕರೆವಾರು ಪ್ರಮಾಣ ಕುಸಿತ ಹಾಗೂ ಹವಾಮಾನ ವೈಪರಿತ್ಯದಿಂದ ಉತ್ಪಾದನೆ ಕುಸಿತವಾಗಿದೆ ಎಂದು ಸಿಎಐ ಹೇಳಿದೆ.
ಭಾರತ ಹತ್ತಿಯನ್ನು ರಪ್ತು ಮಾಡುವ ಪ್ರಮಾಣವೂ ಕುಸಿತವಾಗುತ್ತಿದೆ. 2022-23 ರಲ್ಲಿ 2.84 ಮಿಲಿಯನ್ ಬೇಲ್ಸ್ ಹತ್ತಿ ವಿದೇಶಕ್ಕೆ ರಪ್ತಾಗಿತ್ತು. 2023-24 ರಲ್ಲಿ ಅದರ ಪ್ರಮಾಣ 1.7 ಮಿಲಿಯನ್‌ಗೆ ಇಳಿಕೆಯಾಗಿತ್ತು.