ಬದಿಯಡ್ಕ: ವೀಣಾವಾದಿನಿ ಸಂಗೀತ ವಿದ್ಯಾಪೀಠ ವೀಣಾವಾದಿನಿಯಲ್ಲಿ ಇತ್ತೀಚೆಗೆ ಶಿವರಾತ್ರಿ ಅಖಂಡ ಶಿವ ಸಂಗೀತ ಸ್ಮರಣ ಕಾರ್ಯಕ್ರಮ ನಡೆಯಿತು.
ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳು ಸಮಾರಂಭವನ್ನು ಉದ್ಘಾಟಿಸಿ ಆಶೀರ್ವಚನ ನೀಡಿ, ನಾದಪ್ರಿಯನಾದ ಮಹಾಶಿವನ ಆರಾಧನೆಯಲ್ಲಿ ಸಂಗೀತಕ್ಕೆ ಮಹತ್ವವಿದೆ. ಮಹಾಕಾಳನ ಡಮರು ಸಕಲ ದುರಿತಗಳನ್ನೂ ಕಳೆದು ಸುಮಧುರ ಪ್ರಪಂಚ ಸೃಷ್ಟಿಗೆ ಪ್ರಢೇರಣೆಯಾಗಿದ್ದು, ನಾದೋಪಾಸನೆ ಯಶಕ್ಕರ ಎಂದು ನುಡಿದರು.
ಎಚ್.ಎಸ್.ಭಟ್.ಕಾಞಂಗಾಡ್ ಅಧ್ಯಕ್ಷತೆ ವಹಿಸಿದ್ದರು. ಪ್ರೊ.ರವೀಂದ್ರ ಸ್ವಾಮಿ, ವಿದ್ವಾನ್.ವೇಣುಗೋಪಾಲ ಶಾನುಭೋಗ್, ವಿದ್ವಾನ್.ಟಿ.ಪಿ.ಶ್ರೀನಿವಾಸನ್, ವಿದ್ವಾನ್.ಯೋಗೀಶ ಶರ್ಮಾ ಬಳ್ಳಪದವು ಉಪಸ್ಥಿತರಿದ್ದರು.
ಬಳಿಕ ವಿದ್ವಾನ್.ಟಿ.ಪಿ.ಶ್ರೀನಿವಾಸನ್ ಅವರಿಂದ ಹಿಂದೂಸ್ಥಾನಿ ಗಾಯನ ನಡೆಯಿತು. ವಿದ್ವಾನ್ ಉಸ್ತಾದ್ ರಫೀಕ್ ಖಾನ್ (ಸಿತಾರ್) ನಲ್ಲಿ ಸಹಕರಿಸಿದರು. ಟಿ.ಪಿ.ವಿವೇಕ್ (ಹಿಂದೂಸ್ಥಾನಿ ಕಚೇರಿ), ಸದಾಶಿವ ಆಚಾರ್ಯ ಕಾಸರಗೋಡು(ಕರ್ನಾಟಕ ಶಾಸ್ತ್ರೀಯ ಸಂಗೀತ) ಸಹಿತ ಹಿರಿಯ ಕಲಾವಿದರಲ್ಲದೆ ಅನೇಕ ಉದಯೋನ್ಮುಖ ಕಲಾವಿದರು ಹಾಗೂ ಬಾಲ ಕಲಾವಿದರು ತಮ್ಮ ಸಂಗೀತ ಕಛೇರಿಗಳನ್ನು ಪ್ರಸ್ತುತಪಡಿಸಿದರು.
ಬೆಳಿಗ್ಗೆ ಶಿವಪೂಜೆಯ ಜೊತೆಗೆ ಒಂದು ಲಕ್ಷಕ್ಕೂ ಹೆಚ್ಚು ಶಿವನಾಮ ಜಪ ಪಠಣ ನಡೆಯಿತು. ಸಂಗೀತ,ಪೂಜೆಯ ಜೊತೆಗೆ, ಧ್ಯಾನ, ಭರತನಾಟ್ಯ, ಮೃದಂಗ ವಾದನ ಕಾರ್ಯಕ್ರಮದ ಭಾಗವಾಗಿತ್ತು. 47 ಕಲಾವಿದರು ಭಾಗವಹಿಸಿದ್ದರು. ತ್ರಿಕಾಲ ಶಿವಪೂಜೆ, ಶಿವ ಪಂಚಾಕ್ಷರಿ ಲಕ್ಷ ಜಪಯಜ್ಞ ನಡೆಯಿತು.