ತಿರುವನಂತಪುರಂ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ರಾತ್ರಿ ವೇಳೆ ವಾಹನ ಸಂಚಾರ ಸಡಿಲಿಸುವಂತೆ ಕರ್ನಾಟಕ ಸರ್ಕಾರದ ಮೇಲೆ ಒತ್ತಡ ಹೇರುತ್ತಿರುವಂತೆಯೇ, ಈ ನಿರ್ಧಾರಕ್ಕೆ ವಯನಾಡ್‌ನ ಪರಿಸರವಾದಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
'ಪರಿಸರವಾದಿಗಳ ನಿರಂತರ ಹೋರಾಟ, ಒತ್ತಾಯದ ಬಳಿಕ ನ್ಯಾಯಾಲಯದ ಆದೇಶದಂತೆ ಕಳೆದ 16 ವರ್ಷಗಳಿಂದ ರಾತ್ರಿ ವೇಳೆ ಬಂಡೀಪುರದಲ್ಲಿ ಸಂಚಾರ ನಿಷೇಧ ಹೇರಲಾಗಿದೆ.
ಇದರಿಂದ, ವನ್ಯಜೀವಿಗಳು, ಪರಿಸರಕ್ಕೆ ದೊಡ್ಡ ಮಟ್ಟದ ಲಾಭವಾಗಿದೆ. ರಾತ್ರಿ ವೇಳೆ ಸಂಚಾರ ನಿಷೇಧ ಕೈಬಿಡಲು ಯಾವುದೇ ಕಾರಣ ಇಲ್ಲ. ಆದರೆ, ಈ ಮಾರ್ಗದಲ್ಲಿ ಸಂಪೂರ್ಣ ಸಂಚಾರ ನಿಷೇಧವನ್ನು ವಿರೋಧಿಸುತ್ತದೆ' ಎಂದು ವಯನಾಡ್ ಪ್ರಕೃತಿ ಸಂರಕ್ಷಣೆ ವೇದಿಕೆ (ಡಬ್ಲ್ಯೂಪಿಎಸ್‌ಎಸ್) ಯು ಪ್ರಕಟಣೆಯಲ್ಲಿ ತಿಳಿಸಿದೆ.
ವಯನಾಡ್ ಲೋಕಸಭಾ ಕ್ಷೇತ್ರವನ್ನು ಕಾಂಗ್ರೆಸ್ ಹಿರಿಯ ನಾಯಕಿ ಪ್ರಿಯಾಂಕಾ ಗಾಂಧಿ ಪ್ರತಿನಿಧಿಸುತ್ತಿದ್ದಾರೆ. ಇಲ್ಲಿನ ಜನರ ಬೇಡಿಕೆ ಅನುಸರಿಸಿ, ರಾತ್ರಿ ಸಂಚಾರ ಸಡಿಲಗೊಳಿಸಲು ಎಐಸಿಸಿ ನಾಯಕತ್ವವು ಕರ್ನಾಟಕದ ಮೇಲೆ ನಿರಂತರ ಒತ್ತಡ ಹೇರುತ್ತಿದೆ.