HEALTH TIPS

ಪಾಕ್‌ ಆಕ್ರಮಿತ ಮಾತ್ರವಲ್ಲ, ಚೀನಾ ವಶದಲ್ಲಿರುವ ಕಾಶ್ಮೀರವನ್ನೂ ಮರಳಿ ತನ್ನಿ: ಒಮರ್


ಜಮ್ಮು: 'ಪಾಕ್‌ ಆಕ್ರಮಿತ ಕಾಶ್ಮೀರವನ್ನು ಮಾತ್ರವಲ್ಲ, ಚೀನಾ ಅಕ್ರಮವಾಗಿ ವಶಪಡಿಸಿಕೊಂಡಿರುವ ರಾಜ್ಯದ ಭಾಗವನ್ನೂ ಮರಳಿ ತಂದರೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ನಾನು ಋಣಿಯಾಗಿರುತ್ತೇನೆ' ಎಂದು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ಆಳಿದ್ದ ಮಹಾರಾಜ ಹರಿಸಿಂಗ್ ಅವರನ್ನು ಟೀಕಿಸಿದ ನ್ಯಾಷನಲ್ ಕನ್ಫರೆನ್ಸ್ ಪಕ್ಷದ ವಿರುದ್ಧ ಮುಗಿಬಿದ್ದ ಬಿಜೆಪಿ ಮುಖಂಡರ ವಿರುದ್ಧ ಒಮರ್‌ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರ ಭಾಷಣದ ಮೇಲಿನ ವಂದನಾ ನಿರ್ಣಯದಲ್ಲಿ ಮಾತನಾಡಿ, 'ಪಾಕಿಸ್ತಾನ ಕದ್ದಿರುವ ಭೂಭಾಗವನ್ನು ಮರಳಿ ತರುವುದಾಗಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಲಂಡನ್‌ನಲ್ಲಿ ಬುಧವಾರ ಹೇಳಿದ್ದಾರೆ. ಹಾಗಿದ್ದರೆ ಇವರನ್ನು ತಡೆದಿರುವವರು ಯಾರು? ಅದನ್ನು ತರಬೇಡಿ ಎಂದು ನಾವೇನಾದರೂ ಹೇಳಿದ್ದೇವಾ?' ಎಂದು ಕೇಳಿದ್ದಾರೆ.

'ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಪಾಕ್ ಆಕ್ರಮಿತ ಪಾಕಿಸ್ತಾನವನ್ನು ಮರಳಿ ಪಡೆಯುವ ಅವಕಾಶವಿತ್ತು. ಈಗಲೂ ಕಾಲ ಮಿಂಚಿಲ್ಲ. ಜಮ್ಮು ಮತ್ತು ಕಾಶ್ಮೀರದ ಭೂಪಟವನ್ನು ನೋಡಿದಾಗ ಪಾಕಿಸ್ತಾನ ಆಕ್ರಮಿತ ಪಾಕಿಸ್ತಾನ ಮಾತ್ರವಲ್ಲ, ರಾಜ್ಯದ ಒಂದಷ್ಟು ಭೂಭಾಗ ಚೀನಾ ಆಕ್ರಮಿಸಿದೆ. ಆದರೆ ಅದರ ಕುರಿತು ಏಕೆ ಮಾತನಾಡುತ್ತಿಲ್ಲ?' ಎಂದಿದ್ದಾರೆ.

ಸದನದಲ್ಲಿ ಮಾತನಾಡಿದ ಬಿಜೆಪಿ ಮುಖಂಡ ಸುನೀಲ್ ಶರ್ಮಾ, 'ಮಹಾರಾಜ ಹರಿಸಿಂಗ್ ಅವರನ್ನು ಅವಮಾನಿಸಿದ್ದನ್ನು ಖಂಡಿಸುತ್ತೇವೆ. ನ್ಯಾಷನಲ್ ಕಾನ್ಫರೆನ್ಸ್, ಪಿಡಿಪಿ ಹಾಗೂ ಕಾಂಗ್ರೆಸ್‌ನ ಯಾವೊಬ್ಬ ನಾಯಕನೂ ಡೋಗ್ರಾದ ಕೊನೆಯ ದೊರೆಯ ಕುರಿತು ಒಳ್ಳೆಯ ಮಾತುಗಳನ್ನಾಡಿದ್ದು ಕೇಳಿಲ್ಲ' ಎಂದಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಒಮರ್, 'ಲಡಾಕ್ ಅನ್ನು ಜಮ್ಮು ಮತ್ತು ಕಾಶ್ಮೀರದಿಂದ ಪ್ರತ್ಯೇಕಿಸಿದ್ದನ್ನು ಬಿಜೆಪಿ ಸಮರ್ಥಿಸಿಕೊಳ್ಳುತ್ತಿದೆ. ಆದರೆ ಅಲ್ಲಿನ ಜನರಿಗೆ ಏನು ಬೇಕು ಎಂದಾದರೂ ಕೇಳಿದ್ದೀರಾ? ಲಡಾಕ್‌ನ ಬೌದ್ಧರು ರಾಜ್ಯ ರಚನೆಯಿಂದ ಸಿಹಿ ಹಂಚಿದರು ಎಂದಿದ್ದೀರಿ. ಲಡಾಕ್‌ನ ಜನರು ತಮ್ಮನ್ನು ಜಮ್ಮು ಮತ್ತು ಕಾಶ್ಮೀರಕ್ಕೆ ಮರಳಿ ಸೇರಿಸಿ ಎಂದು ಈಗ ದೆಹಲಿಗೆ ಅಲೆಯುವಂತೆ ಮಾಡಿದ್ದೀರಿ' ಎಂದು ಆರೋಪಿಸಿದರು.

'ನಾವು ಎಂದಿಗೂ ಮಹಾರಾಜ ಅವರ ಪರಂಪರೆಗೆ ಧಕ್ಕೆ ತರುವ ಕೆಲಸ ಮಾಡಿಲ್ಲ. ಡೋಗ್ರಾ ಆಡಳಿತಗಾರರ ಹೆಸರಿನಲ್ಲಿರುವ ಯಾವುದೇ ಸಂಸ್ಥೆಯ ಹೆಸರನ್ನು ಬದಲಿಸಿಲ್ಲ' ಎಂದು ಒಮರ್ ಸ್ಪಷ್ಟಪಡಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries