ಮುಂಬೈ: ಯೂಟ್ಯೂಬ್ ರಿಯಾಲಿಟಿ ಶೋ ಒಂದರಲ್ಲಿ ಸೋಶಿಯಲ್ ಮಿಡಿಯಾ ಇನ್‌ಫ್ಲುಯೆನ್ಸರ್ ರಣವೀರ್ ಅಲಹಾಬಾದಿಯಾ ಅವರ ಅಶ್ಲೀಲ ಮಾತು ಪ್ರಕರಣದಲ್ಲಿ ಹಾಸ್ಯ ಕಲಾವಿದ ಸಮಯ್ ರೈನಾ ಅವರು ಶುಕ್ರವಾರ ಮಹಾರಾಷ್ಟ್ರ ಸೈಬರ್ ಪೊಲೀಸರ ಮುಂದೆ ಎರಡನೇ ಬಾರಿಗೆ ಹಾಜರಾದರು ಎಂದು ಪೊಲೀಸರು ತಿಳಿಸಿದ್ದಾರೆ.
ದಕ್ಷಿಣ ಮುಂಬೈನ ವರ್ಲ್ಡ್ ಟ್ರೇಡ್ ಸೆಂಟರ್‌ನಲ್ಲಿರುವ ಸೈಬರ್ ಕ್ರೈಂ ಕಚೇರಿಗೆ ಮಧ್ಯಾಹ್ನ ಆಗಮಿಸಿದರು. ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿಂದೆ ಮಾರ್ಚ್ 24ರಂದು ನವಿ ಮುಂಬೈನ ಹಾಪೆಯಲ್ಲಿರುವ ಸೈಬರ್ ಇಲಾಖೆ ಪ್ರಧಾನ ಕಚೇರಿಯಲ್ಲಿ ಹಾಜರಾಗಿದ್ದರು.
ಫೆಬ್ರುವರಿಯಲ್ಲಿ ರೈನಾ ಅವರ 'ಇಂಡಿಯಾಸ್ ಗಾಟ್ ಲ್ಯಾಟೆಂಟ್' ವೆಬ್ ಶೋನಲ್ಲಿ ಪೋಷಕರ ಲೈಂಗಿಕತೆಯ ಬಗ್ಗೆ ಅಸಭ್ಯವಾಗಿ ಮಾತನಾಡಿದ್ದರು. ಇದು ಭಾರಿ ವಿವಾದಕ್ಕೆ ಕಾರಣವಾಗಿತ್ತು.
ಈ ಬಗ್ಗೆ ಅಲಹಾಬಾದಿಯಾ ಹಾಗೂ ಇತರರ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ರಾಜ್ಯ ಪೊಲೀಸರ ಸೈಬರ್ ಮತ್ತು ಮಾಹಿತಿ ಭದ್ರತಾ ಘಟಕವು ತನಿಖೆ ನಡೆಸುತ್ತಿದೆ. ರೈನಾ, ಅಲಹಾಬಾದಿಯಾ ಮತ್ತು ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಇತರರ ವಿರುದ್ಧ ದೂರು ದಾಖಲಾಗಿದೆ.