ನವದೆಹಲಿ: ಸ್ತನವನ್ನು ಮುಟ್ಟುವುದು, ಪ್ಯಾಂಟ್ ದಾರವನ್ನು ಎಳೆಯುವುದು ಅತ್ಯಾಚಾರದ ಅಪರಾಧವಲ್ಲ ಎಂದು ಅಲಹಾಬಾದ್ ಹೈಕೋರ್ಟ್ ನೀಡಿದ್ದ ಆದೇಶವನ್ನು ಸುಪ್ರೀಂ ಕೋರ್ಟ್ ಬುಧವಾರ ತಡೆಹಿಡಿದಿದೆ.
ಹೈಕೋರ್ಟ್ ಆದೇಶದಲ್ಲಿ ಮಾಡಲಾದ ಕೆಲವು ಅಭಿಪ್ರಾಯಗಳು ಸಂಪೂರ್ಣ ಅಸೂಕ್ಷ್ಮ ಮತ್ತು ಅಮಾನವೀಯ ವಿಧಾನವನ್ನು ಚಿತ್ರಿಸುತ್ತದೆ ಎಂದು ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಅಗಸ್ಟೀನ್ ಜಾರ್ಜ್ ಮಸಿಹ್ ಅವರನ್ನೊಳಗೊಂಡ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಅಲಹಾಬಾದ್ ಹೈಕೋರ್ಟ್ ಮಾರ್ಚ್ 17 ರಂದು ನೀಡಿದ್ದ ಆದೇಶದದ ಬಗ್ಗೆ ಸ್ವಯಂಪ್ರೇರಣೆಯಿಂದ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಆರಂಭಿಸಿದ್ದು, ಈ ಸಂಬಂಧ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರ್ಕಾರ, ಉತ್ತರ ಪ್ರದೇಶ ಸರ್ಕಾರ ಮತ್ತು ಇತರ ಸಂಬಂಧಪಟ್ಟವರಿಗೆ ನೋಟಿಸ್ ನೀಡಿದೆ.
ಮಾರ್ಚ್ 17 ರಂದು ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿ ಕೇವಲ ಎದೆಮುಟ್ಟುವುದು, ಪ್ಯಾಂಟ್ ದಾರವನ್ನು ಎಳೆದರೆ ಅದು ಅತ್ಯಾಚಾರದ ಅಪರಾಧವಲ್ಲ. ಅಂತಹ ಅಪರಾಧವು ಯಾವುದೇ ಮಹಿಳೆಯ ಮೇಲೆ ಹಲ್ಲೆ ಅಥವಾ ಕ್ರಿಮಿನಲ್ ಬಲಪ್ರಯೋಗದ ವ್ಯಾಪ್ತಿಗೆ ಬರುತ್ತದೆ ಎಂದು ತೀರ್ಪು ನೀಡಿತ್ತು.
ಈ ಪ್ರಕರಣದಲ್ಲಿ, ಪ್ರಾಸಿಕ್ಯೂಷನ್ ಪ್ರಕಾರ, ಆರೋಪಿಗಳಾದ ಪವನ್ ಮತ್ತು ಆಕಾಶ್, 11 ವರ್ಷದ ಬಾಲಕಿಯ ಎದೆಯನ್ನು ಮುಟ್ಟಿ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ನಂತರ, ಅವರಲ್ಲಿ ಒಬ್ಬರು ಆಕೆಯ ಪ್ಯಾಂಟ್ ನ ದಾರವನ್ನು ಮುರಿದು ಕೆಳಗೆ ಎಳೆಯಲು ಪ್ರಯತ್ನಿಸಿದರು. ಕೊನೆಗೆ ದಾರಿಹೋಕರ ಗಮನಕ್ಕೆ ಬಂದಿದ್ದರಿಂದ ಬಾಲಕಿಯನ್ನು ಸ್ಥಳದಲ್ಲಿ ಬಿಟ್ಟು ಪರಾರಿಯಾಗಿದ್ದಾರೆ.
ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ವಿಚಾರಣೆ ನಡೆಸಿದ್ದ ಅಲಹಾಬಾದ್ ಹೈಕೋರ್ಟ್, 'ಸಂತ್ರಸ್ತ ಬಾಲಕಿಯ ಸ್ತನಗಳನ್ನು ಮುಟ್ಟುವುದು, ಆಕೆಯ ಪ್ಯಾಂಟ್ ನ ದಾರವನ್ನು ಹಿಡಿದು ಎಳೆಯುವುದು ಅತ್ಯಾಚಾರ ಆಗುವುದಿಲ್ಲ ಎಂಬ ಅಭಿಪ್ರಾಯ ನೀಡಿತ್ತು. ಅಲಹಾಬಾದ್ ಹೈಕೋರ್ಟ್ ಅಭಿಪ್ರಾಯಕ್ಕೆ ದೇಶಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಅಲ್ಲದೆ ಸುಪ್ರೀಂ ಕೋರ್ಟ್ ಕೂಡ ಈ ಸಂಬಂಧ ಸ್ವಯಂ ಪ್ರೇರಿತ ವಿಚಾರಣೆ ಆರಂಭಿಸಿತ್ತು.
'ವಿ ದಿ ವುಮೆನ್ ಆಫ್ ಇಂಡಿಯಾ' ಎಂಬ ಸಂಘಟನೆ ತೀರ್ಪನ್ನು ನ್ಯಾಯಾಲಯದ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಸ್ವಯಂ ಪ್ರೇರಿತವಾಗಿ ವಿಚಾರಣೆ ನಡೆಸಲು ನಿರ್ಧರಿಸಿತ್ತು.