ಮಂಜೇಶ್ವರ: ಇತಿಹಾಸ ಪ್ರಸಿದ್ಧವಾದ ಕಡಂಬಾರ್ ಜುಮಾ ಮಸೀದಿಯಲ್ಲಿ ಪವಿತ್ರ ರಂಜಾನ್ ಪ್ರಯುಕ್ತ ವೆಲ್ಫೇರ್ ಕಮಿಟಿಯ ಅಧ್ಯಕ್ಷ ಹಾಗೂ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಮಂಜೇಶ್ವರ ಗ್ರಾಮ ಪಂಚಾಯತಿ ಸದಸ್ಯ ಉಸ್ಮಾನ್ ಕಡಂಬಾರ್ ಅವರ ನೇತೃತ್ವದಲ್ಲಿ ಗ್ರಾಂಡ್ ಇಫ್ತಾರ್ ಸಂಗಮ ಹಾಗೂ ಔತಣ ಕೂಟ ಬುಧವಾರ ನಡೆಯಿತು. ಕಾರ್ಯಕ್ರಮದಲ್ಲಿ ಊರಿನ ಮುಖಂಡರು, ರಾಜಕೀಯ ಹಾಗೂ ಸಾಮಾಜಿಕ ಧಾರ್ಮಿಕ ಸಂಘಟನೆಗಳ ನೇತಾರರು ಸಹಿತ ನೂರಾರು ಮಂದಿ ಪಾಲ್ಗೊಂಡರು.
ಅನ್ಯೋನ್ಯತೆಯ ಸಂಕೇತವಾದ ಇಫ್ತಾರ್:
ರಂಜಾನ್ ತಿಂಗಳ ಪಾವಿತ್ರ್ಯವನ್ನು ಸಾರುವ ಈ ಇಫ್ತಾರ್ ಕೂಟವು ಧಾರ್ಮಿಕ ಸೌಹಾರ್ದತೆಯನ್ನು ಉತ್ತೇಜಿಸುವಂತಹದ್ದಾಗಿತ್ತು. ಭಾಗವಹಿಸಿದ ಎಲ್ಲರಿಗೂ ಸಾಂಪ್ರದಾಯಿಕ ಖಾದ್ಯಗಳು, ಹಣ್ಣುಗಳು, ಜ್ಯೂಸ್, ಮತ್ತು ವಿವಿಧ ಖಾದ್ಯಗಳೊಂದಿಗೆ ಆಹಾರ ವ್ಯವಸ್ಥೆ ಕಲ್ಪಿಸಲಾಯಿತು.
ಈ ಸಂದರ್ಭ ಕಾಸರಗೋಡು ಜಿಲ್ಲಾ ಪಂಚಾಯತಿ ಸದಸ್ಯ ಗೋಲ್ಡನ್ ರಹ್ಮಾನ್, ಉಸ್ಮಾನ್ ಹಾಜಿ ಕಡಂಬಾರ್, ಶಾಫಿ ಬರ್ವ, ಜನ ಪ್ರತಿನಿಧಿಗಳಾದ ಹಮೀದ್ ಹೊಸಂಗಡಿ, ಮೊಹಮ್ಮದ್ ಸಿದ್ದೀಖ್, ನೇತಾರರಾದ ಹರ್ಷಾದ್ ವರ್ಕಾಡಿ, ಮುಸ್ತಫ ಕಡಂಬಾರ್, ಮೊಯ್ದು ಕಡಂಬಾರ್, ಕರೀಂ ಬರಕ, ಕಲೀಲ್ ಕಡಂಬಾರ್, ಕಡಂಬಾರ್ ಜುಮಾ ಮಸೀದಿ ಕಾರ್ಯದರ್ಶಿ, ಕೋಶಾಧಿಕಾರಿ ಸಹಿತ ವಿವಿಧ ರಾಜಕೀಯ ನೇತಾರರು ಹಾಗೂ ಊರಿನ ಗಣ್ಯರು ಪಾಲ್ಗೊಂಡು ಧಾರ್ಮಿಕ ಭಾವನೆ ಹೊಂದಿ ಒಂದೇ ವೇದಿಕೆಯಲ್ಲಿ ಸಮಾನತೆಯನ್ನು ಮೆರೆದರು. ಮುಸ್ಲಿಂ ಸಮಾಜದವರು ಮಾತ್ರವಲ್ಲ, ಊರಿನ ಇತರ ಸಮುದಾಯದವರೂ ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.