ಮಧೂರು : ಭತ್ತದ ಮುಡಿಕಟ್ಟುವುದು ತುಳುನಾಡಿನ ಇತಿಹಾಸದಲ್ಲಿ ಹಾಸುಹೊಕ್ಕಗಿರುವ ಕಲೆ. ಇಂದು ಬೇಸಾಯದಿಂದ ಕೃಷಿಕರು ದೂರಾಗುತ್ತಿರುವ ಹಿನ್ನೆಲೆಯಲ್ಲಿ ಮುಡಿಕಟ್ಟುವ ಸಂಪ್ರದಯವೂ ಮಾಯವಾಗುತ್ತಿದೆ.
ಇಂತಹ ಮುಡಿಕಟ್ಟುವ ಅಪೂರ್ವ ಸನ್ನಿವೇಶವನ್ನು ಇತಿಹಾಸ ಪ್ರಸಿದ್ಧ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಕಾಣಬಹುದಾಗಿದೆ. ಮೂಡಪ್ಪಸೇವೆಗೆ ಅಗತ್ಯವಿರುವ ಅಕ್ಕಿಯನ್ನು ಮುಡಿ ಕಟ್ಟಿ ಸಂರಕ್ಷಿಸಿಟ್ಟುಕೊಳ್ಳುವ ನಿಟ್ಟಿನಲ್ಲಿ ದೇವಾಲಯದಲ್ಲಿ ಸೇವಾ ರೂಪದಲ್ಲಿ ಮುಡಿಕಟ್ಟುವ ಕೆಲಸ ನಡೆಯುತ್ತಿದೆ. ಪ್ರಗತಿಪರ ಕೃಷಿಕ ಬಾಲಕೃಷ್ಣ ರೈ ಅವರ ನೇತೃತ್ವದ ತಂಡವೊಂದು ಅಕ್ಕಿಯ 18ಮುಡಿಗಳನ್ನು ನಿರ್ಮಿಸಿದೆ. ಪುತ್ತಿಗೆ ನಿವಾಸಿಗಳಾದ ವೇಣುಗೋಪಾಲ್, ಶಿವಪ್ರಸಾದ್, ಗಣೇಶ್ ಕಿದೂರು, ನಾರಾಯಣ ಬಾಡೂರು, ಚಂದ್ರಶೇಖರ ಮುಗು, ನಾರಾಯಣ ಅಮೆತ್ತೊಡು ಮೊದಲಾದವರು ಮುಡಿ ಕಟ್ಟಲು ಸಹಕರಿಸಿದ್ದಾರೆ. ಪ್ರತಿ ಮುಡಿ ನಿರ್ಮಾಣಕ್ಕೆ ಕನಿಷ್ಠ ಒಂದುವರೆ ತಾಸು ಬೇಕಾಗುತ್ತದೆ. ನಾಜೂಕು ಹಾಗೂ ಸುಂದರವಾಗಿ ಮುಡಿ ನಿರ್ಮಿಸಲು ಇದಕ್ಕಿಂತಲೂ ಹೆಚ್ಚಿನ ಸಮಯಾವಕಾಶ ತಗಲುತ್ತದೆ ಎಂಬುದಾಗಿ ಈ ಕೃಷಿಕರು ತಿಳಿಸುತ್ತಾರೆ.
ಬೈಹುಲ್ಲನ್ನು ತಿರುವಿ ಅದರಲ್ಲೇ ಹಗ್ಗ ತಯಾರಿಸುವುದು, ಜತೆಗೆ ಬಾಳೆ ಗಿಡದ ನಾರು ಬಳಸಿ ತಯಾರಿಸಿದ ಹಗ್ಗದಿಂದ ಮುಡಿ ಕಟ್ಟಲಾಗುತ್ತದೆ. ಮುಡಿಕಟ್ಟುವ ಕೆಲಸದಲ್ಲಿ ಪ್ರಾವೀಣ್ಯತೆ ಪಡೆದವರಿಗೆ ಮಾತ್ರ ಸುಂದರ ಮುಡಿ ತಯಾರಿಸಲು ಸಾಧ್ಯ. ಒಣಗಿದ ಬೈಹುಲ್ಲನ್ನು ವೃತ್ತಾಕಾರವಾಗಿ ಹರಡಿ, ಅದನ್ನು ಮೊದಲೇ ತಯಾರಿಸಿಟ್ಟುಕೊಂಡ ಬೈಹುಲ್ಲಿನ ದಾರ ಅಥವಾ ಬಾಳೆ ನಾರಿನಿಂದ ಸುತ್ತು ಬಿಗಿಯಾಗಿಸಿಕೊಂಡು ಮಧ್ಯಭಾಗಕ್ಕೆ ಭತ್ತ ಯಾ ಅಕ್ಕಿಯನ್ನು ಸುರಿಯುತ್ತ ಈ ದಾರವನ್ನು ವೃತ್ತಾಕಾರವಾಗಿ ಬಿಗಿಯಾಗಿಸಿಕೊಂಡು ಮುಡಿ ತಯಾರಿಸಲಾಗುತ್ತದೆ. ಮುಡಿ ತಯಾರಿಸಿ ಮನೆಯಲ್ಲಿಟ್ಟುಕೊಳ್ಳುವುದು ಶುಭಸಂಕೇತವಾಗಿಯೂ ಪರಿಗಣಿಸಲಾಗುತ್ತದೆ.