ಮಧೂರು: ನಮ್ಮಿಂದಲೇ ಎಲ್ಗಲವೂ ಎಂಬ ಅಹಂಭಾವ ಸಲ್ಲದು. ಕ್ಕೆ ಬೆಂಬಲ ನೀಡಿದರೆ, ಪರಮಾತ್ಮ ರಕ್ಷಿಸುತ್ತಾನೆ. ಕಲಿಯುಗದಲ್ಲಿ ಧರ್ಮ ಕಾರ್ಯಗಳಿಗೆ ಮಹತ್ವವಿದೆ. ವಿಶ್ವಂಭರ ರೂಪಿಯ ಆರಾಧಕನಾದ ಗಣೇಶನಿಗೆ ಗಜಮುಖ ಬಂದಿರುವುದರ ಹಿಂದಿನ ತತ್ವ ಅರಿತಿರಬೇಕು. ನಮ್ಮೊಳಗೆ ಪರಮಾತ್ಮನಿದ್ದು ಎಲ್ಲವನ್ನೂ ಮಾಡಿಸುವನೆಂಬ ಭಾವ ಗಣೇಶತ್ವದ ತಿರುಳು ಎಂದು ಉಡುಪಿ ಶಿರೂರು ಮಠದ ವೇದವರ್ಧನ ತೀರ್ಥ ಶ್ರೀಪಾದರು ಆಶೀರ್ವಚನದಲ್ಲಿ ತಿಳಿಸಿದರು.
ಮಧೂರು ಶ್ರೀಮದನಂತೇಶ್ವರ ಸಿದ್ಧಿವಿನಾಯಕ ದೇವಾಲಯದಲ್ಲಿ ನಡೆಯುತ್ತಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವ-ಮೂಡಪ್ಪ ಸೇವೆಯ ಅಂಗವಾಗಿ ಶನಿವಾರ ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ಮನುಷ್ಯ ಜೀವನ ಕೇವಲ ಕರ್ಮ ನಿರ್ವಹಣೆಗಿರುವ ಉಪಕರಣ. ಅದನ್ನು ಸದಾಶಯದ ಕ್ರಿಯೆಗಳಿಗೆ ಬಳಸುವ ಮೂಲಕ ಬದುಕು ಸಾರ್ಥಕಗೊಳಿಸಬೇಕು. ದೇವಾಲಯ ಸಹಿತ ಎಲ್ಲಾ ಆರಾಧನಾಲಯಗಳೂ ಉಪಾಸನೆಯ ಜೊತೆಗೆ ಸಹ ಬಾಳ್ವೆಯ ಸೇತುವೆ ನಿರ್ಮಿಸಿ ಧರ್ಮ-ಕರ್ಮಗಳಿಗೆ ಬೆಳಕು ತೋರುತ್ತವೆ ಎಂದವರು ಆಶೀರ್ವಚನದಲ್ಲಿ ತಿಳಿಸಿದರು.
ಮಾಣಿಲ ಶ್ರೀಧಾಮದ ಮೋಹನದಾಸ ಪರಮಹಂಸ ಸ್ವಾಮೀಜಿ ಉಪಸ್ಥಿತರಿದ್ದು ಆಶೀರ್ವಚನ ನೀಡಿದರು. ಶ್ರೀಮಹಾವಿಷ್ಣು ಕ್ಷೇತ್ರ ಕುತ್ಯಾಳ ಹಾಗೂ ಪುತ್ತೂರು ಕೋಟಿಚೆನ್ನಯ ಕ್ಷೇತ್ರದ ಮೊಕ್ತೇಸರ ವಿನೋದ್ ಆಳ್ವ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಧಾರ್ಮಿಕ ಉಪನ್ಯಾಸ ನೀಡಿ ಮಾತನಾಡಿ, ಸಜ್ಜನ ಮತ್ತು ದುರ್ಜನ ಎಂಬ ವ್ಯವಸ್ಥೆಯಲ್ಲಿ ಇಂದದು ವಿಭಜಿಸದಷ್ಟು ಸವಾಲಾಗುತ್ತಿದೆ. ಒಬ್ಬನೇ ವ್ಯುಕ್ತಿಯಲ್ಲಿ ಇವೆರಡೂ ಇಂದು ಮೇಳೈಸಿಕೊಂಡು ಕಳವಳ ಮೂಡಿಸುತ್ತಿದೆ. ಆದರೆ, ನಾನೆಂಬ ಭಾವವನ್ನು ಮೀರಿ ನಾವೆಂಬ ಸಮಷ್ಠಿ ಪ್ರಜ್ಞೆ ನಮ್ಮೆಲ್ಲರಲ್ಲಿ ಮೂಡಿಬರಬೇಕು. ಈ ನಿಟ್ಟಿನಲ್ಲಿ ಸಮಗ್ರ ಹಿಂದೂಗಳನ್ನೂ ಒಗ್ಗೂಡಿಸುತ್ತಿರುವ ರಾ.ಸ್ವ.ಸೇ.ಸಂಘ ಆರಾಧನಾಲಯಗಳಲ್ಲಿ ಧರ್ಮ ರಕ್ಷಣೆಯಲ್ಲಿ ಯಾವುದೇ ಭೇದಗಳಿಲ್ಲದೆ ಕಾರ್ಯನಿರ್ವಹಿಸುತ್ತಿದೆ. ದೇವಾಲಯದೊಳಗೆ ರಾಜಕೀಯೇತರವಾಗಿ ಹಿಂದೂ ಎನ್ನುವ ಪ್ರಜ್ಞೆಯೊಂದೇ ಮಧೂರಿನಂತಹ ಶ್ರದ್ಧಾಕೇಂದ್ರದ ಐತಿಹಾಸಿಕವಾದ ಇಂತಹ ಉತ್ಸವ ಮುನ್ನಡೆಸಲು ಕಾರಣ. ಈ ಒಗ್ಗಟ್ಟನ್ನು ಮುರಿಯುವ ಯಾವ ಯತ್ನಗಳಿಗೂ ಸೊಪ್ಪುಹಾಕಲಾಗದು. ಇಲ್ಲಿ ನಡೆಯುತ್ತಿರುವ ಕಾರ್ಯಕ್ರಮಗಳ ಯಶಸ್ಸಿಗೆ ಶ್ರಮಿಸುತ್ತಿರುವ ಸಾಮಾನ್ಯ ಸ್ವಯಂಸೇವಕ ಎಲ್ಲಿಯೂ ತನ್ನ ಹೆಸರು ಉಲ್ಲೇಖಿಸುವ ಬಗ್ಗೆ ತಲೆಕೆಡಿಸುವುದಿಲ್ಲ. ಇಂತಹ ಸ್ವಾಮಿ ಕಿಂಕರರೇ ಭಗವಂತನ ಅನುಗ್ರಹಕ್ಕೆ ಕಾರಣವಾಗುತ್ತದೆ ಎಂದು ತಿಳಿಸಿದರು.
ಉದ್ಯಮಿ ಗಣೇಶ್ ಶೆಟ್ಟಿ, ಆನೆಕಲ್ಲು ಶ್ರೀಜಲದುರ್ಗಾಪರಮೇಶ್ವರಿ ಕ್ಷೇತ್ರದ ಮೊಕ್ತೇಸರ ವಕೀಲ ಶಾಮ ಭಟ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಕ.ಸಾಪ. ಜಿಲ್ಲಾಧ್ಯಕ್ಷ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ, ಮಲಬಾರ್ ದೈವಸ್ವಂ ಬೋಡ್ ಅಭಿಯಂತರ ಪದ್ಮನಾಭ ಅಡಿಯೋಡಿ, ಭಾರತೀಯ ಭೂಸೇನೆಯ ನಿವೃತ್ತ ಸುಭೇದಾರ್ ವಿಶ್ವನಾಥ ಗಟ್ಟಿ, ವಿಜಯನ್ ಕರಿಪೋಡಿ, ಮುರಳಿ ಗಟ್ಟಿ ಪರಕ್ಕಿಲ, ರಾಜಾರಾಮ ಪೆರ್ಲ ಉಪಸ್ಥಿತರಿದ್ದರು.
ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ರಾಜೀವನ್ ನಂಬ್ಯಾರ್ ಸ್ವಾಗತಿಸಿ, ವಕೀಲ ವಿನೋದ್ ಕುಮಾರ್ ನಾಯ್ಕ್ ವಂದಿಸಿದರು. ಕೆ.ಎಸ್ಸ್.ಎ. ಜಿಲ್ಲಾಧ್ಯಕ್ಷ ರಾಜಾರಾಮ ಪೆರ್ಲ ಕಾಯಕ್ರಮ ನಿರೂಪಿಸಿದರು.