ಢಾಕಾ: ಶೇಕ್ ಹಸಿನಾ ಸರ್ಕಾರ ಪದಚ್ಯುತಗೊಂಡ ನಂತರ ಬಾಂಗ್ಲಾದೇಶ ಹಂಗಾಮಿ ಸರ್ಕಾರದ ಮುಖ್ಯಸ್ಥರಾಗಿರುವ ಮೊಹಮ್ಮದ್ ಯೂನಸ್ ಅವರು ಚೀನಾ ಪ್ರವಾಸ ಕೈಗೊಳ್ಳಲು ಸಿದ್ದತೆ ನಡೆಸಿದ್ದಾರೆ.
ಇದೇ ಮಾರ್ಚ್ 27, 28 ರಂದು ಮೊಹಮ್ಮದ್ ಯೂನಸ್ ಅವರು ಚೀನಾಕ್ಕೆ ಭೇಟಿ ನೀಡಲಿದ್ದಾರೆ ಎಂದು ಸರ್ಕಾರದ ಮುಖ್ಯ ವಕ್ತಾರ ಶಫಿಕುಲ್ ಅಲಂ ಅವರು ತಿಳಿಸಿದ್ದಾರೆ.
ಚೀನಾ-ಬಾಂಗ್ಲಾದೇಶದ ಬಾಂಧವ್ಯವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಈ ಪ್ರವಾಸದ ಯೋಜನೆ ಸಿದ್ದವಾಗಿದೆ. ಬಾಂಗ್ಲಾದೇಶವನ್ನು ತಯಾರಿಕಾ ಕೇಂದ್ರವನ್ನು (ಮ್ಯಾನುಫ್ಯಾಕ್ಚರಿಂಗ್ ಹಬ್) ಮಾಡಲು ಚೀನಾದೊಂದಿಗೆ ಮಹತ್ವದ ಮಾತುಕತೆ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.
ಯೂನಸ್ ಅವರು ಮಾರ್ಚ್ 27 ರಂದು ಬಿಜೀಂಗ್‌ನಲ್ಲಿ ನಡೆಯಲಿರುವ Boao Forum for Asia (BFA) ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಈ ಸಮಾವೇಶದಲ್ಲಿ 27 ರಾಷ್ಟ್ರಗಳು ಭಾಗವಹಿಸಲಿವೆ ಎಂದು ವಿವರಿಸಿದ್ದಾರೆ.
ಮಾರ್ಚ್ 28ರಂದು ಯೂನಸ್ ಅವರು ಚೀನಾ ಅಧ್ಯಕ್ಷ ಕ್ಷಿ ಜಿನ್‌ಪಿಂಗ್ ಅವರನ್ನು ಭೇಟಿಯಾಗಲಿದ್ದಾರೆ. ಉಭಯ ದೇಶಗಳ ಬಾಂಧವ್ಯ ವೃದ್ಧಿಯನ್ನು ಹೊಸ ಎತ್ತರಕ್ಕೆ ತೆಗೆದುಕೊಂಡು ಹೋಗಲು ಈ ಭೇಟಿ ಕಾರಣವಾಗಲಿದೆ ಎಂದು ತಿಳಿಸಿದ್ದಾರೆ.
ಚೀನಾ ಅಧ್ಯಕ್ಷರ ಕಚೇರಿಯು ಬಾಂಗ್ಲಾದೇಶ ನಾಯಕರನ್ನು ಸ್ವಾಗತಿಸಲು ಉತ್ಸುಕವಾಗಿದೆ ಎಂದು ಢಾಕಾ ಟ್ರಿಬುನ್ ಪತ್ರಿಕೆ ವರದಿ ಮಾಡಿದೆ.