ಗಾಂಧಿನಗರ: 'ಶಾಸನಸಭೆಯ ಕೆಲ ಸದಸ್ಯರು ನನ್ನನ್ನು ಸಮುದಾಯದ ಹೆಸರು ಉಲ್ಲೇಖಿಸಿ ಅಪಮಾನಿಸುತ್ತಿದ್ದಾರೆ' ಎಂದು ಆರೋಪಿಸಿರುವ ಗುಜರಾತ್ ವಿಧಾನಸಭೆಯ ಏಕೈಕ ಮುಸ್ಲಿಂ ಸದಸ್ಯ, 'ನನಗೆ ರಕ್ಷಣೆ ನೀಡಬೇಕು' ಎಂದು ಸ್ಪೀಕರ್ ಅವರಿಗೆ ಮನವಿ ಮಾಡಿದ್ದಾರೆ.
ಜಮಲ್‌ಪುರ್ ಕ್ಷೇತ್ರವನ್ನು ಪ್ರತಿನಿಧಿಸುವ ಇಮ್ರಾನ್ ಖೇಡಾವಾಲಾ ಈ ರೀತಿ ಆರೋಪಿಸಿದ್ದಾರೆ.ತಮ್ಮ ಕ್ಷೇತ್ರದಲ್ಲಿ ಚಾಲ್ತಿಯಲ್ಲಿರುವ ಮೇಲ್ಸೇತುವೆ ನಿರ್ಮಾಣ ಕಾಮಗಾರಿಯ ವಿವರ ಕೇಳಿದ್ದರು.
ಇದಕ್ಕೆ ಸಚಿವ ಜಗದೀಶ್ ವಿಶ್ವಕರ್ಮ, 'ಕಾಮಗಾರಿ ಮುಗಿಸಲು ನನಗೆ ಶಾಸಕರ ನೆರವು ಬೇಕು. ಆ ಕ್ಷೇತ್ರದಲ್ಲಿ 700ಕ್ಕೂ ಹೆಚ್ಚು ಮಾಂಸ ಸಾಗಣೆ ಲಾರಿಗಳು, ಅಂಗಡಿಗಳಿವೆ. 1,200ಕ್ಕೂ ಹೆಚ್ಚು ರಿಕ್ಷಾಗಳಿವೆ. ಒಂದೇ ಸಮುದಾಯದವರ 11 ಗ್ಯಾರೇಜ್‌ಗಳು ಇದ್ದು ಅತಿಕ್ರಮಣವಾಗಿದೆ' ಎಂದರು. ಶಾಸಕರ 'ಅನಧಿಕೃತ' ಕಚೇರಿಯನ್ನೂ ಈಚೆಗೆ ನೆಲಸಮ ಮಾಡಲಾಗಿತ್ತು ಎಂದರು.
ಆದರೆ, 'ನನ್ನ ಕಚೇರಿ ಅನಧಿಕೃತವಲ್ಲ' ಎಂದು ಪ್ರತಿಪಾದಿಸಿದ್ದ ಶಾಸಕ ಇಮ್ರಾನ್, ಪೂರಕ ದಾಖಲೆ ತೋರಿಸಲೂ ಸಿದ್ಧ ಎಂದು ತಿಳಿಸಿದ್ದರು. ಜೊತೆಗೆ ಶಾಸಕರೊಬ್ಬರ ಮಾತನ್ನು ಉಲ್ಲೇಖಿಸಿ ರಕ್ಷಣೆಯನ್ನು ನೀಡುವಂತೆ ಸ್ಪೀಕರ್‌ಗೆ ಮನವಿ ಮಾಡಿದ್ದರು.
'ವೈಯಕ್ತಿಕ ನೆಲೆಯಲ್ಲಿ ನಿಂದಿಸಬಾರದು. ಸಚಿವರು ಸೇರಿದಂತೆ ಎಲ್ಲ ಸದಸ್ಯರು ಪರಸ್ಪರ ಗೌರವಿಸಬೇಕು. ಎಲ್ಲ ಶಾಸಕರಿಗೆ ರಕ್ಷಣೆ ಒದಗಿಸುವುದು ನನ್ನ ಕರ್ತವ್ಯ' ಎಂದು ಸ್ಪೀಕರ್ ಶಂಕರ್ ಚೌಧರಿ ಅವರು ಸದಸ್ಯರಿಗೆ ಸಲಹೆ ನೀಡಿದ್ದಾರೆ.