ನವದೆಹಲಿ: ದೇಶದ ರಕ್ಷಣಾ ಸಾಮರ್ಥ್ಯ ಬಲಪಡಿಸುವುದು ಹಾಗೂ ದೇಶೀಯವಾಗಿ ಆವಿಷ್ಕಾರಕ್ಕೆ ಉತ್ತೇಜನ ನೀಡುವ ಉದ್ದೇಶದ 'ಮಾಣಿಕ್ ಶಾ ರಾಷ್ಟ್ರೀಯ ಭದ್ರತೆ ಅಧ್ಯಯನ ಹಾಗೂ ಸಂಶೋಧನೆ ಕುರಿತ ಉತ್ಕೃಷ್ಟತಾ ಕೇಂದ್ರ' (ಎಂಸಿಒಇಎನ್‌ಎಸ್‌ಎಸ್‌ಆರ್) ಸ್ಥಾಪನೆಗೆ ದೇಶದ ವಿವಿಧ ಐಐಟಿಗಳು ಹಾಗೂ ದೆಹಲಿಯ ಇಂದ್ರಪ್ರಸ್ಥ ಮಾಹಿತಿ ತಂತ್ರಜ್ಞಾನ ಸಂಸ್ಥೆ (ಐಐಐಟಿ) ಕೈಜೋಡಿಸಿವೆ.
ಮೂರು ಸಶಸ್ತ್ರ ಪಡೆಗಳು ಈ ಯೋಜನೆಗೆ ನೆರವು ನೀಡಲಿವೆ. ಗುವಾಹಟಿ, ಕಾನ್ಪುರ, ಜೋಧಪುರ, ಧಾರವಾಡದಲ್ಲಿರುವ ಐಐಟಿಗಳು ಹಾಗೂ ಸಿ-ಡಿಎಸಿ ಈ ಯೋಜನೆಗೆ ಕೈಜೋಡಿಸಿವೆ.
ಸೈಬರ್ ಸುರಕ್ಷತೆ, ಕೃತಕ ಬುದ್ಧಿಮತ್ತೆ, ಹೈಪರ್‌ಸಾನಿಕ್ ಅಪ್ಲಿಕೇಷನ್, ಶಸ್ತ್ರಾಸ್ತ್ರಗಳ ತಯಾರಿಕೆ ಕ್ಷೇತ್ರಕ್ಕೆ ಈ ಸಂಸ್ಥೆಗಳು ಕೊಡುಗೆ ನೀಡಲಿವೆ ಎಂದು ಪ್ರಕಟಣೆ ತಿಳಿಸಿದೆ.
ಈ ಉತ್ಕೃಷ್ಟತಾ ಕೇಂದ್ರದ (ಎಂಸಿಒಇಎನ್‌ಎಸ್‌ಎಸ್‌ಆರ್) ಉದ್ಘಾಟನೆ ಹಾಗೂ ಸಂಸ್ಥೆ ಆಡಳಿತ ಪರಿಷತ್ತಿನ ಸಾಮಾನ್ಯಸಭೆ ಐಐಐಟಿ-ದೆಹಲಿಯಲ್ಲಿ ಸೋಮವಾರ ನೆರವೇರಿತು ಎಂದೂ ಪ್ರಕಟಣೆ ತಿಳಿಸಿದೆ.