ನವದೆಹಲಿ: ಪಡಿತರ ಚೀಟಿಗಳು 'ಜನಪ್ರಿಯತೆಗಾಗಿ ರೂಪಿಸಿರುವ ಕಾರ್ಡು'ಗಳಂತಾಗಿವೆ ಎಂದು ಅಭಿಪ್ರಾಯಪಟ್ಟಿರುವ ಸುಪ್ರೀಂ ಕೋರ್ಟ್, 'ಬಡವರಿಗಾಗಿ ಜಾರಿಗೊಳಿಸಿರುವ ಸಾರ್ವಜನಿಕ ಪಡಿತರ ಯೋಜನೆಯ ಪ್ರಯೋಜನ ನಿಜವಾದ ಫಲಾನುಭವಿಗಳಿಗೆ ತಲುಪುತ್ತಿದೆಯೇ' ಎಂದು ಬುಧವಾರ ಪ್ರಶ್ನಿಸಿದೆ.
'ಸಬ್ಸಿಡಿಯ ಲಾಭ ಅರ್ಹ ಫಲಾನುಭವಿಗಳಿಗೇ ತಲುಪಬೇಕು. ಬಡವರಿಗಾಗಿ ಇರುವ ಈ ಪ್ರಯೋಜನಗಳು ಅರ್ಹತೆ ಹೊಂದಿರದ ವ್ಯಕ್ತಿಗಳ ಪಾಲಾಗುತ್ತಿವೆ' ಎಂದೂ ಸುಪ್ರೀಂ ಕೋರ್ಟ್ ಅಚ್ಚರಿ ವ್ಯಕ್ತಪಡಿಸಿದೆ.
ಕೋವಿಡ್-19 ಪಿಡುಗಿನ ವೇಳೆ ವಲಸೆ ಕಾರ್ಮಿಕರು ಎದುರಿಸಿದ ಸಂಕಷ್ಟಗಳಿಗೆ ಸಂಬಂಧಿಸಿ ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡಿರುವ ಅರ್ಜಿ ವಿಚಾರಣೆ ವೇಳೆ, ನ್ಯಾಯಾಲಯ ಈ ಮಾತು ಹೇಳಿದೆ.
ನ್ಯಾಯಮೂರ್ತಿಗಳಾದ ಸೂರ್ಯಕಾಂತ ಹಾಗೂ ಎನ್.ಕೋಟೀಶ್ವರ ಸಿಂಗ್ ಅವರು ಇದ್ದ ನ್ಯಾಯಪೀಠ ಅರ್ಜಿ ವಿಚಾರಣೆ ನಡೆಸಿತು.
ಬಡವರಿಗೆ ವಿತರಿಸಲಾದ ಉಚಿತ ಪಡಿತರ ಕುರಿತು ಪ್ರತಿಕ್ರಿಯೆ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದ ಪೀಠ, ವಿಚಾರಣೆಯನ್ನು ಮುಂದೂಡಿತು.
ವಿಚಾರಣೆ: ಇದಕ್ಕೂ ಮುನ್ನ ವಿಚಾರಣೆ ವೇಳೆ, 'ಕೆಲವು ರಾಜ್ಯಗಳು ಸಾಕಷ್ಟು ಸಂಖ್ಯೆಯಲ್ಲಿ ಪಡಿತರ ಚೀಟಿಗಳನ್ನು ವಿತರಣೆ ಮಾಡಿದ್ದಾಗಿ ಹೇಳುತ್ತವೆ. ಅಭಿವೃದ್ಧಿ ವಿಚಾರ ಬಂದಾಗ ಕೆಲ ರಾಜ್ಯಗಳು ತಮ್ಮ ತಲಾದಾಯ ವೃದ್ಧಿಸುತ್ತಿದೆ ಎಂಬ ವಾದ ಮಂಡಿಸುತ್ತವೆ. ಆದರೆ, ಸಬ್ಸಿಡಿ ವಿಷಯ ಪ್ರಸ್ತಾಪಿಸಿದಾಗ ತಮ್ಮ ರಾಜ್ಯದ ಒಟ್ಟು ಜನಸಂಖ್ಯೆಯ ಶೇ 75ರಷ್ಟು ಜನರು ಬಿಪಿಎಲ್ ಕಾರ್ಡು ಹೊಂದಿದ್ದಾಗಿ ಹೇಳುತ್ತವೆ. ಇಂತಹ ಸಂಗತಿಗಳ ನಡುವೆ ಸಮನ್ವಯ ಸಾಧಿಸುವುದು ಹೇಗೆ?' ಎಂದು ಪೀಠ ಕೇಳಿದೆ.
ಕೆಲ ಅರ್ಜಿದಾರರ ಪರ ಹಾಜರಿದ್ದ ಹಿರಿಯ ನ್ಯಾಯವಾದಿ ಪ್ರಶಾಂತ ಭೂಷಣ್,'ಇಂತಹ ವ್ಯತ್ಯಾಸಗಳಿಗೆ ಜನರ ಆದಾಯದಲ್ಲಿನ ಅಸಮಾನತೆಯೇ ಕಾರಣ' ಎಂದು ಪೀಠಕ್ಕೆ ತಿಳಿಸಿದರು.
'ಬೆರಳೆಣಿಕೆಯಷ್ಟು ಜನರು ಭಾರಿ ಸಂಪತ್ತು ಹೊಂದಿದ್ದಾರೆ. ಶ್ರೀಮಂತರು ಶ್ರೀಮಂತರಾಗುತ್ತಿದ್ದಾರೆ, ಬಡವರು ಬಡವರಾಗಿಯೇ ಉಳಿಯುತ್ತಿದ್ದಾರೆ' ಎಂದು ಪ್ರಶಾಂತ ಭೂಷಣ್ ಹೇಳಿದರು.
'ಇ-ಶ್ರಮ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಂಡಿರುವ ಬಡ ವಲಸೆ ಕಾರ್ಮಿಕರ ಸಂಖ್ಯೆ 8 ಕೋಟಿ ಇದ್ದು, ಇವರಿಗೆ ಉಚಿತವಾಗಿ ಪಡಿತರ ನೀಡಬೇಕು' ಎಂದೂ ಹೇಳಿದರು.
ಆಗ, ನ್ಯಾಯಮೂರ್ತಿ ಸೂರ್ಯಕಾಂತ, 'ಪಡಿತರ ಚೀಟಿಗಳನ್ನು ನೀಡುವ ವೇಳೆ ಯಾವುದೇ ರಾಜಕೀಯ ಬೆರಸುವುದಿಲ್ಲ ಎಂಬ ವಿಶ್ವಾಸ ನಮ್ಮದು. ಅಲ್ಲದೇ, ಬಡವರ ಸ್ಥಿತಿ ಕುರಿತು ನನಗೆ ಅರಿವು ಇದೆ. ಕೆಲ ಕುಟುಂಬಗಳು ಈಗಲೂ ಬಡತನದಿಂದ ಬಳಲುತ್ತಿರುವುದೂ ನನಗೆ ತಿಳಿದಿದೆ' ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಪ್ರಶಾಂತ ಭೂಷಣ್, 'ಕೇಂದ್ರ ಸರ್ಕಾರ 2021ರಲ್ಲಿ ಜನಗಣತಿ ನಡೆಸಿಲ್ಲ. 2011ರ ಜನಗಣತಿಯ ದತ್ತಾಂಶ ಆಧರಿಸಿಯೇ ಪಡಿತರ ನೀಡುತ್ತಿದೆ. ಈ ಕಾರಣದಿಂದ, ಉಚಿತ ಪಡಿತರ ಪಡೆಯಲು ಅರ್ಹರಾಗಿರುವ 10 ಕೋಟಿ ಜನರು ಬಿಪಿಎಲ್ ನಿಂದ ಹೊರಗುಳಿದಿದ್ದಾರೆ' ಎಂದರು.
ಕೇಂದ್ರ ಸರ್ಕಾರ ಪರ ವಾದಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ, 'ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ, ಅಂದಾಜು 81.35 ಕೋಟಿ ಜನರಿಗೆ ಕೇಂದ್ರ ಸರ್ಕಾರ ಉಚಿತ ಪಡಿತರ ನೀಡುತ್ತಿದೆ. ಇತರ 11 ಕೋಟಿ ಜನರು ಇಂಥದೇ ಯೋಜನೆಗಳಡಿ ಪ್ರಯೋಜನ ಪಡೆಯುತ್ತಿದ್ದಾರೆ' ಎಂದು ಪೀಠಕ್ಕೆ ತಿಳಿಸಿದರು.