ಇಂಫಾಲ್: ಮಣಿಪುರದ ಕಾಂಗ್‌ಪೋಕ್‌ಪಿ ಜಿಲ್ಲೆಯ ವಿವಿಧೆಡೆ ಕುಕಿ ಸಮುದಾಯದ ಪ್ರತಿಭಟನಕಾರರು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ಘರ್ಷಣೆಯಲ್ಲಿ ಒಬ್ಬ ಪ್ರತಿಭಟನಕಾರ ಮೃತಪಟ್ಟಿದ್ದು, 25 ಮಂದಿಗೆ ಗಾಯಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗುಂಡೇಟಿನಿಂದ ಗಾಯಗೊಂಡಿದ್ದ 30 ವರ್ಷ ವಯಸ್ಸಿನ ಲಾಲ್‌ಗೌಥಾಂಗ್ ಎನ್ನುವವರು ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟರು.
ಗಾಯಗೊಂಡ 25 ಮಂದಿಯನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಮಣಿಪುರದಲ್ಲಿ ಜನರ ಸಂಚಾರಕ್ಕೆ ನಿರ್ಬಂಧಗಳು ಇರಬಾರದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನೀಡಿರುವ ಸೂಚನೆಯನ್ನು ಕುಕಿ ಸಮುದಾಯದ ಕೆಲವರು ವಿರೋಧಿಸಿದ್ದರು. ಸೂಚನೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದವರನ್ನು ಚದುರಿಸಲು ಪೊಲೀಸರು ಅಶ್ರುವಾಯು ಶೆಲ್ ಸಿಡಿಸಿದಾಗ, ಭದ್ರತಾ ಪಡೆಗಳು ಮತ್ತು ಪ್ರತಿಭಟನಕಾರರ ನಡುವೆ ಘರ್ಷಣೆ ಉಂಟಾಯಿತು.
ಪ್ರತಿಭಟನೆಯಲ್ಲಿ ಭಾಗಿಯಾದವರು ಖಾಸಗಿ ವಾಹನಗಳಿಗೆ ಬೆಂಕಿ ಹಚ್ಚಿ, ಇಂಫಾಲ್‌ನಿಂದ ಸೇನಾಪತಿ ಜಿಲ್ಲೆಗೆ ತೆರಳುತ್ತಿದ್ದ ಸರ್ಕಾರಿ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸನ್ನು ತಡೆಯಲು ಯತ್ನಿಸಿದಾಗ ಪರಿಸ್ಥಿತಿ ಇನ್ನಷ್ಟು ವಿಷಮಗೊಂಡಿತು. ಪ್ರತಿಭಟನಕಾರರು ಇಂಫಾಲ್-ದಿಮಪುರ ಹೆದ್ದಾರಿಯಲ್ಲಿ ಸಂಚಾರಕ್ಕೆ ಅಡ್ಡಿಪಡಿಸಿದರು. ಸರ್ಕಾರಿ ವಾಹನಗಳ ಸಂಚಾರಕ್ಕೆ ಅಡ್ಡಿ ಉಂಟುಮಾಡಲು ಟೈರ್‌ಗಳಿಗೆ ಬೆಂಕಿ ಹಚ್ಚಿದರು.
ಮೈತೇಯಿ ಸಮುದಾಯದ 'ಫೆಡರೇಷನ್ ಆಫ್ ಸಿವಿಲ್ ಸೊಸೈಟಿ' ಸಂಘಟನೆ ಆಯೋಜಿಸಿದ್ದ ಶಾಂತಿ ನಡಿಗೆಯನ್ನು ಕೂಡ ಪ್ರತಿಭಟನಕಾರರು ವಿರೋಧಿಸಿದರು. 10 ವಾಹನಗಳು ಇದ್ದ ಈ ಶಾಂತಿ ನಡಿಗೆಯು ಕಾಂಗ್‌ಪೋಕ್‌ಪಿ ಜಿಲ್ಲೆ ತಲುಪುವ ಮೊದಲೇ ಭದ್ರತಾ ಪಡೆಗಳು ತಡೆದವು.
ಈ 'ನಡಿಗೆ'ಗೆ ಅನುಮತಿ ಇರಲಿಲ್ಲ. ಹೀಗಾಗಿ ಅದನ್ನು ತಡೆಯುವಂತೆ ಸೂಚನೆ ಇತ್ತು ಎಂದು ಪೊಲೀಸರು ಹೇಳಿದ್ದಾರೆ. ಶನಿವಾರದಿಂದ ರಾಜ್ಯದಲ್ಲಿ ಮುಕ್ತ ಸಂಚಾರಕ್ಕೆ ಅವಕಾಶ ಇರಲಿದೆ ಎಂದು ಶಾ ಅವರು ಹೇಳಿದ್ದನ್ನು ತಾವು ಪಾಲಿಸುತ್ತಿದ್ದುದಾಗಿ ಸಂಘಟನೆಯ ಪ್ರತಿನಿಧಿಗಳು ಹೇಳಿದ್ದಾರೆ.
ಮುಕ್ತ ಸಂಚಾರಕ್ಕೆ ಅವಕಾಶ ಕಲ್ಪಿಸಿರುವ ಕೇಂದ್ರದ ನಡೆಯನ್ನು ತಾನು ವಿರೋಧಿಸುತ್ತಿರುವುದಾಗಿ ಕುಕಿ-ಜೊ ಗ್ರಾಮ ಸ್ವಯಂಸೇವಕರ ಗುಂಪೊಂದು ವಿಡಿಯೊ ಬಿಡುಗಡೆ ಮಾಡಿದೆ. ಆದರೆ ಈ ವಿಡಿಯೊ ನಕಲಿಯೋ, ಅಸಲಿಯೋ ಎಂಬುದನ್ನು ಪರಿಶೀಲಿಸಲು ಸಾಧ್ಯವಾಗಿಲ್ಲ.
'ನಮ್ಮ ಪ್ರದೇಶಕ್ಕೆ ಬರಲು ಯತ್ನಿಸಿದರೆ ಭಾರಿ ಪ್ರತಿರೋಧ ಎದುರಾಗಲಿದೆ. ಪ್ರತ್ಯೇಕ ಆಡಳಿತ ಜಾರಿಗೆ ಬರುವವರೆಗೆ ಮುಕ್ತ ಸಂಚಾರ ಇಲ್ಲ' ಎಂದು ವಿಡಿಯೊದಲ್ಲಿ ಸ್ವಯಂಸೇವಕನೊಬ್ಬ ಹೇಳಿದ್ದಾನೆ.