ನವದೆಹಲಿ: ಗಾಜಾ ಪಟ್ಟಿಯಲ್ಲಿನ ಪರಿಸ್ಥಿತಿ ಬಗ್ಗೆ ಭಾರತ ಬುಧವಾರ ತೀವ್ರ ಕಳವಳ ವ್ಯಕ್ತಪಡಿಸಿದೆ. ಕದನ ವಿರಾಮದ ನಡುವೆಯೂ ಗಾಜಾ ಪಟ್ಟಿ ಮೇಲೆ ಇಸ್ರೇಲ್ ಬಾಂಬ್ ದಾಳಿಯನ್ನು ಪುನರಾರಂಭಿಸಿರುವುದರಿಂದ ಸಂತ್ರಸ್ತರಿಗೆ ತುರ್ತಾಗಿ ಮಾನವೀಯ ನೆರವು ಒದಗಿಸುವಂತೆ ಆಗ್ರಹಿಸಿದೆ.
ಹಮಾಸ್ ಸಂಘಟನೆಯವರು ಒತ್ತೆಯಾಳುಗಳ ಬಿಡುಗಡೆಗೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದೂ ಭಾರತ ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) ಒತ್ತಿ ಹೇಳಿದೆ.
'ಗಾಜಾಪಟ್ಟಿಯಲ್ಲಿ ಜನರಿಗೆ ನಿರಂತರವಾಗಿ ಮಾನವೀಯ ನೆರವು ದೊರೆಯಬೇಕು ನಾವು ಕರೆ ನೀಡುತ್ತೇವೆ' ಎಂದು ಎಂಇಎ ಪ್ರಕಟಣೆಯಲ್ಲಿ ತಿಳಿಸಿದೆ.
ಹಮಾಸ್ ಆಡಳಿತವಿರುವ ಪ್ರದೇಶದ ಆರೋಗ್ಯ ಸಚಿವಾಲಯದ ಪ್ರಕಾರ, ಇಸ್ರೇಲ್ ಮಂಗಳವಾರ ನಡೆಸಿದ ಬಾಂಬ್ ದಾಳಿಯಲ್ಲಿ 400ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಇದು, ಜನವರಿ 19ರಂದು ಜಾರಿಗೆ ಬಂದಿದ್ದ ಕದನ ವಿರಾಮದ ಮೇಲೆ ಪರಿಣಾಮ ಬೀರಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಈ ಬೆಳವಣಿಗೆಗಳ ಬೆನ್ನಲ್ಲೇ ಭಾರತದ ಪ್ರತಿಕ್ರಿಯೆ ಬಂದಿದೆ.