ತಿರುವನಂತಪುರಂ: ದೇವಾಲಯಗಳಲ್ಲಿ ಆನೆ ಮೆರವಣಿಗೆಗೆ ಮಿತಿಗೊಳಪಟ್ಟು ನಿರ್ಬಂಧ ಹೇರುವಂತೆ ತಿರುವಾಂಕೂರು ದೇವಸ್ವಂ ಮಂಡಳಿ ಕೇಳಿದೆ. ಆನೆಗಳನ್ನು ತಪ್ಪಿಸಲು ಸಾಧ್ಯವಾಗದ ಹಬ್ಬಗಳ ಸಮಯದಲ್ಲಿ ಮಾತ್ರ ಬಳಸಬೇಕು.
ಇತರ ಸ್ಥಳಗಳಲ್ಲಿ, ಆನೆಗಳಿಗೆ ಪರ್ಯಾಯವಾಗಿ ದೈವಿಕ ವಾಹನಗಳ ಬಳಕೆಯನ್ನು ಪರಿಗಣಿಸಬಹುದು ಎಂದು ಸೂಚಿಸಲಾಗಿದೆ. ತಿರುವಾಂಕೂರು ದೇವಸ್ವಂ ಮಂಡಳಿ ಮತ್ತು ತಂತ್ರಿಗಳು ನಡೆಸಿದ ಸಭೆಯಲ್ಲಿ ಈ ನಿರ್ದೇಶನವನ್ನು ಹೊರಡಿಸಲಾಗಿದೆ.
ದೇವಸ್ಥಾನದ ಮೆರವಣಿಗೆಯ ಸಮಯದಲ್ಲಿ ಸಂಭವಿಸಿದ ಅವಘಟಗಳ ಹಿನ್ನೆಲೆಯಲ್ಲಿ ತಿರುವಾಂಕೂರು ದೇವಸ್ವಂ ಮಂಡಳಿಯ ಪ್ರಧಾನ ಕಚೇರಿಯಲ್ಲಿ ವಿಶೇಷ ಸಭೆ ನಡೆಸಲಾಯಿತು.
ತಂತ್ರ ವಿದ್ಯಾಪೀಠದ ಕಾರ್ಯಾಧ್ಯಕ್ಷ ಮುಲ್ಲಪ್ಪಳ್ಳಿ ಕೃಷ್ಣನ್ ನಂಬೂದಿರಿ ಆನೆಗಳ ಮೇಲಿನ ಕ್ರೌರ್ಯವನ್ನು ನಿಲ್ಲಿಸಬೇಕೆಂದು ಒತ್ತಾಯಿಸಿದ್ದಾರೆ. ದೇವಾಲಯದ ಉತ್ಸವಗಳಲ್ಲಿ ಆನೆಗಳನ್ನು ನಿಲ್ಲಿಸಲು ಮುಖ್ಯ ಕಾರಣ ದಿನನಿತ್ಯದ ಅವಘಡ ಘಟನೆಯಾಗಿದೆ. ಇದನ್ನು ನಿಲ್ಲಿಸಬೇಕು ಮತ್ತು ಕೆಲವು ನಿರ್ಬಂಧಗಳೊಂದಿಗೆ ಆನೆಗಳ ಮೆರವಣಿಗೆಯನ್ನು ಮುಂದುವರಿಸಬೇಕು ಎಂದವರು ತಂತ್ರಿಗಳ ಸಭೆ ಬಳಿಕ ತಿಳಿಸಿದ್ದಾರೆ. .
ತ್ರಿಶೂರ್ ಪೂರಂ, ಗುರುವಾಯೂರು ಆನೆ ಓಟ, ತ್ರಿಪುಣಿತ್ತುರ ಪೂರ್ಣತ್ರಯೀಶ ಕ್ಷೇತ್ರೋತ್ಸವಂ, ಆರಾಟ್ಟುಪುಳ ಮತ್ತು ಅನಯದಿ ಪೂರಂಗಳು ದೇವಾಲಯದ ಪೂಜೆ, ನಂಬಿಕೆ ಮತ್ತು ಆಚರಣೆಗಳ ಭಾಗವಾಗಿದ್ದು, ಐತಿಹಾಸಿಕವಾಗಿ ಪ್ರಸಿದ್ಧವಾಗಿವೆ ಮತ್ತು ದಂತಕಥೆಗಳಿಂದ ತುಂಬಿವೆ, ಕೇರಳದ ಸಾಂಸ್ಕøತಿಕ ಭೂದೃಶ್ಯ ಮತ್ತು ಪರಂಪರೆಯನ್ನು ಗುರುತಿಸುತ್ತವೆ. ಆನೆ ಮೆರವಣಿಗೆಗಳು ಅಂತಹ ಸಮಾರಂಭಗಳ ಅವಿಭಾಜ್ಯ ಅಂಗವಾಗಿರುವುದರಿಂದ, ಅವು ಹಾಗೆಯೇ ಮುಂದುವರಿಯಬೇಕು, ಆದರೆ ಇದೇ ವೇಳೆ, ದೇವಾಲಯದ ಉತ್ಸವಗಳು ಸುರಕ್ಷಿತವಾಗಿವೆ ಎಂದು ಖಚಿತಪಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಸ್ಥೂಲಕಾಯ, ಅನಾರೋಗ್ಯ, ಗಾಯಗೊಂಡ, ದಣಿದ ಅಥವಾ ವೈದ್ಯರು ಸೇರಿದಂತೆ ತಜ್ಞರ ಸಮಿತಿಯಿಂದ ಯಾವುದೇ ಕಾರಣಕ್ಕೂ ವಿಶ್ರಾಂತಿ ಅಗತ್ಯವಿದೆ ಎಂದು ಸಲಹೆ ನೀಡಲಾಗಿರುವ ಆನೆಗಳನ್ನು ಯಾವುದೇ ಸಂದರ್ಭದಲ್ಲೂ ಮೆರವಣಿಗೆ ಮಾಡಬಾರದು ಮತ್ತು ಆನೆಗೆ ಸಾಕಷ್ಟು ವಿಶ್ರಾಂತಿ ಮತ್ತು ಬೇಕಾದಷ್ಟು ಆಹಾರವನ್ನು ಒದಗಿಸುವ ಬಗ್ಗೆ ವಿಶೇಷ ಗಮನ ಹರಿಸಬೇಕು ಎಂದು ಅವರು ಸಲಹೆ ನೀಡಿದರು.
ತಂತ್ರಿ ಸಮಾಜ ಕೂಡ ಕೆಲವು ಸಲಹೆಗಳನ್ನು ಮುಂದಿಟ್ಟಿದ್ದು, ಮೆರವಣಿಗೆಗಳನ್ನು ಏಕಪಕ್ಷೀಯವಾಗಿ ನಿಲ್ಲಿಸಬಾರದು ಎಂದು ಹೇಳಿದೆ. ಸಭೆಯಲ್ಲಿ, ತಂತ್ರಿ ಸಮಾಜದ ಪ್ರತಿನಿಧಿಗಳಾದ ಸೂರ್ಯಕಾಲಡಿ ಸೂರ್ಯನ್ ಪರಮೇಶ್ವರನ್ ನಂಬೂದಿರಿಪಾಡ್, ಕೊಕ್ಕುಳಂ ಮಾಧವರ್ ಶಂಭು ಪೋತ್ತಿ ಮತ್ತು ಪೆರಿಂಜೆರಿ ವಾಸುದೇವನ್ ನಂಬೂದಿರಿಪಾಡ್, 15 ವರ್ಷಗಳ ಹಿಂದೆ ಪ್ರಾರಂಭವಾದ ಆನೆ ಮೆರವಣಿಗೆ ಸಮಾರಂಭಗಳು ಸಾಂಪ್ರದಾಯಿಕವಾಗಿಲ್ಲದಿದ್ದರೆ ಅವುಗಳನ್ನು ನಿಲ್ಲಿಸಬೇಕು ಮತ್ತು ಹೊಸ ಮೆರವಣಿಗೆಗಳನ್ನು ಪ್ರಾರಂಭಿಸುವವರಿಗೆ ಕಠಿಣ ಷರತ್ತುಗಳೊಂದಿಗೆ ಸೂಕ್ತ ಸ್ಥಳಗಳಲ್ಲಿ ಮಾತ್ರ ಅವಕಾಶ ನೀಡಬೇಕು ಎಂದು ಸೂಚಿಸಿದರು.
ಒಂದು ಆನೆ ಅಗತ್ಯವಿರುವ ಕಡೆ ಒಂಬತ್ತು ಆನೆಗಳನ್ನು ಬಳಸುವ ಸಂದರ್ಭಗಳಿವೆ. ಆನೆಗಳನ್ನು ಹಬ್ಬಗಳ ಸಮಯದಲ್ಲಿ ಮಾತ್ರ ಬಳಸಬೇಕು, ಅದನ್ನು ತಪ್ಪಿಸಲು ಸಾಧ್ಯವಿಲ್ಲ ಎಂದು ತಂತ್ರಿ ಸಮಾಜ ಹೇಳಿದೆ. ಮೆರವಣಿಗೆಯ ಉದ್ದವನ್ನು ಕಡಿಮೆ ಮಾಡಬೇಕು ಮತ್ತು ಇತರ ಸ್ಥಳಗಳಲ್ಲಿ ಆನೆಗಳ ಬದಲಿಗೆ ದೇವರ ವಾಹನಗಳನ್ನು ಬಳಸಬಹುದು ಎಂದು ತಂತ್ರಿ ಸಮಾಜದ ಪ್ರತಿನಿಧಿಗಳು ಸಭೆಗೆ ತಿಳಿಸಿದರು.
ತಂತ್ರಿಗಳ ಅಭಿಪ್ರಾಯಗಳನ್ನು ಗಣನೆಗೆ ತೆಗೆದುಕೊಂಡು, ದೇವಾಲಯಗಳಲ್ಲಿ ಆನೆ ಮೆರವಣಿಗೆಗಳನ್ನು ಮಿತಿಗೊಳಿಸಲು ಮಂಡಳಿಯು ಪ್ರಸ್ತಾಪಿಸಿತು.
ರಾಜ್ಯದ ಇತರ ದೇವಸ್ವಂಗಳೊಂದಿಗೆ ಚರ್ಚಿಸಿದ ನಂತರ ಪ್ರಸ್ತಾವನೆಗಳನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು. ಸರ್ಕಾರ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತದೆ.
ದೇವಸ್ವಂ ಮಂಡಳಿಯ ಅಧ್ಯಕ್ಷ ಪಿ.ಎಸ್. ಪ್ರಶಾಂತ್, ಸದಸ್ಯ ಎ. ಅಜಿಕುಮಾರ್, ತಂತ್ರ ವಿದ್ಯಾಪೀಠಂ ಕಾರ್ಯಾಧ್ಯಕ್ಷ ಮುಲ್ಲಪ್ಪಳ್ಳಿ ಕೃಷ್ಣನ್ ನಂಬೂದಿರಿ, ಮತ್ತು ಅಖಿಲ ಕೇರಳ ತಂತ್ರಿ ಸಮಾಜದ ಪ್ರತಿನಿಧಿಗಳಾದ ಸೂರ್ಯಕಲಾಡಿ ಸೂರ್ಯನ್ ಪರಮೇಶ್ವರನ್ ನಂಬೂದಿರಿಪಾಡ್, ಕೊಕ್ಕುಳಂ ಮಾಧವರ್ ಶಂಭು ಪೋತ್ತಿ ಮತ್ತು ಪೆರಿಂಜೆರಿ ವಾಸುದೇವನ್ ನಂಬೂದಿರಿಪಾಡ್ ಸಭೆಯಲ್ಲಿ ಭಾಗವಹಿಸಿದ್ದರು.